ADVERTISEMENT

ಶಾಸಕರ ಸಂಬಂಧಿ ಹೆಸರಿನಲ್ಲಿ ವಂಚನೆ; ಮಹಿಳೆ ಬಂಧನ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 4:16 IST
Last Updated 31 ಅಕ್ಟೋಬರ್ 2020, 4:16 IST

ಬೆಂಗಳೂರು: ಕಾಂಗ್ರೆಸ್ ಶಾಸಕ ಜಿ.ಪರಮೇಶ್ವರ ಅವರ ಸಹೋದರನ ಮಗಳ ಸೋಗಿನಲ್ಲಿ ಜನರನ್ನು ವಂಚಿಸಿದ್ದ ಆರೋಪದಡಿ ಪಲ್ಲವಿ (32) ಎಂಬಾಕೆಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಜ್ಞಾನಗಂಗಾ ಲೇಔಟ್‌ನ ಪಲ್ಲವಿ, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲ ಕೊಡಿಸುವುದಾಗಿ ಹೇಳಿ ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಇತ್ತೀಚೆಗಷ್ಟೇ ‍ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಕ್ಯಾಬ್‌ ಚಾಲಕರಾಗಿದ್ದ ನಾಗದೇವನಹಳ್ಳಿಯ ಯೋಗೇಶ್ ಎಂಬುವರಿಗೆ ಪಲ್ಲವಿ ಪರಿಚಯವಾಗಿತ್ತು. ‘ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಶಾಸಕ ಜಿ.ಪರಮೇಶ್ವರ ಅವರ ಸಹೋದರನ ಮಗಳು. ಸಮಾಜ ಸೇವಕಿ. ನಿರುದ್ಯೋಗಿಗಳು ಸ್ವಂತ ಉದ್ಯೋಗ ಹಾಗೂ ವ್ಯವಹಾರ ಮಾಡಲು ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಬ್ಯಾಂಕಿನಿಂದ ₹ 10 ಲಕ್ಷ ಸಾಲ ಕೊಡಿಸುತ್ತೇನೆ’ ಎಂದು ಆಕೆ ಹೇಳಿದ್ದಳು. ಅದನ್ನು ಯೋಗೇಶ್ ನಂಬಿದ್ದರು.’

ADVERTISEMENT

‘ಯೋಗೇಶ್ ಅವರ ಕಾರಿನಲ್ಲಿ ಪಲ್ಲವಿ ಹಲವೆಡೆ ಓಡಾಡಿದ್ದಳು. ₹ 4.30 ಲಕ್ಷ ಬಾಡಿಗೆ ಆಗಿತ್ತು. ₹21 ಸಾವಿರ ಕೊಟ್ಟಿದ್ದ ಆಕೆ, ಬಾಕಿ ಹಣ ಕೊಟ್ಟಿರಲಿಲ್ಲ. ಕೇಳಿದ್ದಕ್ಕೆ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಯೋಗೇಶ್ ದೂರು ನೀಡಿದ್ದರು. ಆರೋಪಿ ಹಲವರನ್ನು ವಂಚಿಸಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.