ADVERTISEMENT

ಕೆಲಸದ ಆಮಿಷ: ವಂಚನೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:16 IST
Last Updated 27 ಮೇ 2019, 19:16 IST

ಬೆಂಗಳೂರು: ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ ವಂಚಕರು, ನಗರದ ನಿವಾಸಿಯೊಬ್ಬರಿಂದ ₹ 59 ಲಕ್ಷ ಪಡೆದು ವಂಚಿಸಿದ್ದಾರೆ.

ಆ ಸಂಬಂಧ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣ ಪಡೆದು ವಂಚಿಸಿರುವ ಆರೋಪಿಗಳಾದ ಕೋವಾಸ್ ಜುಲಿಕಾ ಹಾಗೂ ಅರ್ನಾಲ್ಡೊ ಗಿಲ್ ತಲೆಮರೆಸಿಕೊಂಡಿದ್ದಾರೆ.

‘ನಗರದ ಖಾಸಗಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಯುವಕ, ಹೊಸ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರು. ಅದಕ್ಕಾಗಿ ‘ಲಿಂಕ್ಡ್‌ ಇನ್‌ ಡಾಟ್‌ ಇನ್’ ಜಾಲತಾಣದಲ್ಲಿ ಖಾತೆ ತೆರೆದಿದ್ದರು. ಅದರಲ್ಲಿದ್ದ ಮಾಹಿತಿ ತಿಳಿದುಕೊಂಡ ಆರೋಪಿಗಳು, ‘ಕೆನಡಾದಲ್ಲಿ ಕೆಲಸ ಖಾಲಿ ಇದೆ’ ಎಂದು ಯುವಕನಿಗೆ ಇ–ಮೇಲ್‌ ಕಳುಹಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಯುವಕ, ಶೈಕ್ಷಣಿಕ ಹಾಗೂ ವೈಯಕ್ತಿಕ ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಕೆಲ ದಿನಗಳ ಬಳಿಕ ಕಂಪನಿಯ ಭಾರತದ ಪ್ರತಿನಿಧಿ ಎಂದು ಹೇಳಿಕೊಂಡು ಯುವಕನಿಗೆ ಕರೆ ಮಾಡಿದ್ದ ಆರೋಪಿ, ‘ನಿಮಗೆ ಕೆಲಸ ಖಾತ್ರಿಯಾಗಿದೆ. 9 ಹಂತದಲ್ಲಿ ಶುಲ್ಕ ಪಾವತಿ ಮಾಡಿದರೆ ವಿಶೇಷ ವಿಮಾನದಲ್ಲಿ ನಿಮ್ಮನ್ನು ಕೆನಡಾಕ್ಕೆ ಕರೆಸಿಕೊಳ್ಳುತ್ತೇವೆ’ ಎಂದು ನಕಲಿ ನೇಮಕಾತಿ ಆದೇಶ ಪತ್ರವನ್ನೂ ಕಳುಹಿಸಿದ್ದ.’

‘ಪತ್ರವನ್ನು ಅಸಲಿ ಎಂದು ತಿಳಿದಿದ್ದ ಯುವಕ, ಆರೋಪಿಗಳು ಹೇಳಿದ್ದ 9 ಬ್ಯಾಂಕ್ ಖಾತೆಗೆ ಕ್ರಮವಾಗಿ ₹ 59 ಲಕ್ಷ ಜಮೆ ಮಾಡಿದ್ದರು. ಅದಾದ ಮರುದಿನದಿಂದಲೇ ಆರೋಪಿಗಳು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.