ADVERTISEMENT

ಬೆಂಗಳೂರು: ಬಿಬಿಎಂಪಿಯಲ್ಲಿ ಕೆಲಸ ಕೊಡಿಸುವ ಆಮಿಷ, 60 ಮಂದಿಗೆ ₹15 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 16:05 IST
Last Updated 6 ಫೆಬ್ರುವರಿ 2024, 16:05 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೆಲಸ ಹಾಗೂ ವಿವಿಧ ಯೋಜನೆಗಳಲ್ಲಿ ಹಣ ಕೊಡಿಸುವ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಶ್ರೀನಗರ ನಿವಾಸಿ ದೀಪಕ್ (22) ಮತ್ತು ವಿದ್ಯಾರಣ್ಯಪುರ ನಿವಾಸಿ ಹರೀಶ್(21) ಬಂಧಿತರು. ಮಹಿಳೆಯೊಬ್ಬರು ನೀಡಿದ್ದ ವಂಚನೆ ದೂರು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಎಸ್ಸೆಸ್ಸೆಲ್ಸಿವರೆಗೂ ಓದಿದ್ದ ಆರೋಪಿಗಳು, ಜನರನ್ನು ವಂಚಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದರು. ಸರ್ಕಾರಿ ಕೆಲಸ, ವಿಧವಾ ವೇತನ, ಹಿರಿಯ ನಾಗರಿಕರ ವೇತನ, ಸಬ್ಸಿಡಿ ಸಾಲ, ಸರ್ಕಾರದ ಯೋಜನೆಗಳಡಿ ಕಾರು, ನಿವೇಶನ ಕೊಡಿಸುವ ಆಮಿಷವೊಡ್ಡುತ್ತಿದ್ದರು. ಶುಲ್ಕ ಹಾಗೂ ಇತರೆ ಖರ್ಚಿನ ಹೆಸರಿನಲ್ಲಿ ಜನರಿಂದ ಹಣ ಪಡೆದು ಆರೋಪಿಗಳು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳು ಇದುವರೆಗೂ 60 ಮಂದಿಯಿಂದ ₹15 ಲಕ್ಷ ಪಡೆದು ವಂಚಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸದ್ಯ ಮಹಿಳೆ ಮಾತ್ರ ದೂರು ನೀಡಿದ್ದಾರೆ. ಯಾರಾದರೂ ವಂಚನೆಗೀಡಾಗಿದ್ದರೆ, ದೂರು ನೀಡಬಹುದು’ ಎಂದು ಪೊಲೀಸರು ಹೇಳಿದರು.

ಖಾತೆಗೆ ಹಣ ವರ್ಗಾವಣೆ: ‘ಕೆಲಸ ಪಡೆಯಲು ಹಾಗೂ ಯೋಜನೆಗಳ ಫಲಾನುಭವಿಗಳಾಗಲು ಜನರು ಆರೋಪಿಗಳಿಗೆ ಕರೆ ಮಾಡುತ್ತಿದ್ದರು. ಅವರಿಗೆ ಪರಿಚಯಸ್ಥರ ಬ್ಯಾಂಕ್ ಖಾತೆ ಸಂಖ್ಯೆ ನೀಡುತ್ತಿದ್ದ ಆರೋಪಿಗಳು, ಶುಲ್ಕವೆಂದು ಹೇಳಿ ₹2 ಸಾವಿರದಿಂದ ₹10 ಸಾವಿರ ಪಡೆಯುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳು ತಮ್ಮ ಖಾತೆಗೆ ನೇರವಾಗಿ ಹಣ ಹಾಕಿಸಿಕೊಳ್ಳುತ್ತಿರಲಿಲ್ಲ. ಪರಿಚಯಸ್ಥರ ಖಾತೆ ಮೂಲಕ ಹಣ ಪಡೆದು, ನಂತರ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಆರೋಪಿಗಳ ಮತ್ತಷ್ಟು ಕೃತ್ಯಗಳನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಲಾಗಿದೆ’ ಎಂದರು.

ಕಂಪ್ಯೂಟರ್ ಆಪರೇಟರ್ ಕೆಲಸ: ‘ದೂರುದಾರ ಮಹಿಳೆಗೆ ಕರೆ ಮಾಡಿದ್ದ ಆರೋಪಿಗಳು, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ಅದನ್ನು ನಂಬಿದ್ದ ಮಹಿಳೆ, ₹8 ಸಾವಿರ ನೀಡಿದ್ದರು. ಕೆಲಸ ಕೊಡಿಸದೇ ಆರೋಪಿಗಳು ಪರಾರಿಯಾಗಿದ್ದರು. ಅದೇ ಮಹಿಳೆ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.