ADVERTISEMENT

ಹೂಡಿಕೆ ಹೆಸರಿನಲ್ಲಿ ಹಲವರಿಗೆ ವಂಚನೆ: ವಿಮಾನ ನಿಲ್ದಾಣದಲ್ಲೇ ಮಾಜಿ ಪಿಡಿಒ ಸೆರೆ

ವಿದೇಶಕ್ಕೆ ಪರಾರಿಯಾಗಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 23:30 IST
Last Updated 19 ಫೆಬ್ರುವರಿ 2025, 23:30 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹಾಗೂ ಹೂಡಿಕೆಯ ಹೆಸರಿನಲ್ಲಿ ಹಣ ಪಡೆದು ಹಲವರಿಗೆ ವಂಚಿಸಿದ್ದ ಆರೋಪಿ, ಮಾಜಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಯೋಗೇಂದ್ರ ಎಂಬಾತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ(ಸಿ.ಕೆ.ಅಚ್ಚುಕಟ್ಟು) ಪೊಲೀಸರು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ADVERTISEMENT

ಚಿನ್ನದ ಉದ್ಯಮ ಹಾಗೂ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಹೆಸರಿನಲ್ಲಿ ಹಣ ಪಡೆದು ಹಲವರಿಗೆ ವಂಚಿಸಿದ್ದ ಆರೋಪದ ಮೇಲೆ ಯೋಗೇಂದ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಯ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು, ಜೆ.ಸಿ. ನಗರ ಹಾಗೂ ವಿಶ್ವೇಶ್ವರಪುರ ಠಾಣೆಯಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು.

ಹಣ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಆರೋಪಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಆರೋಪಿಯ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದರು. ಶ್ರೀಲಂಕಾದ ಕೊಲಂಬೊದಿಂದ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರೋಪಿ ಬರುತ್ತಿದ್ದಂತೆಯೇ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದುಕೊಂಡು ಸಿ.ಕೆ.ಅಚ್ಚುಕಟ್ಟು ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

‘2023ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಜೆ.ಸಿ.ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಯೋಗೇಂದ್ರ ಕರ್ತವ್ಯ ಲೋಪದ ಆರೋಪದ ಮೇರೆಗೆ 2020ರಲ್ಲಿ ಕೆಲಸದಿಂದ ವಜಾಗೊಂಡಿದ್ದ.

‘2023ರಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ ₹17 ಲಕ್ಷ ಪಡೆದು ಪರಾರಿಯಾಗಿದ್ದ ಆರೋಪದ ಮೇಲೆ ಯೋಗೇಂದ್ರ ವಿರುದ್ಧ ಸಿ.ಕೆ. ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

‘ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಬರಲಿದೆ ಎಂದು ವ್ಯಕ್ತಿಯೊಬ್ಬರಿಂದ ₹1.35 ಕೋಟಿ ಪಡೆದು ವಂಚಿಸಿದ್ದ. ಹಣ ಕಳೆದುಕೊಂಡವರು ನೀಡಿದ ದೂರು ಆಧರಿಸಿ ಯೋಗೇಂದ್ರ ವಿರುದ್ಧ 2024ರಲ್ಲಿ ವಿ.ವಿ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಕೆಲಸದಿಂದ ವಜಾಗೊಂಡ ಬಳಿಕ, ವಂಚನೆಯ ಮೂಲಕ ಹಣ ಗಳಿಕೆಯಲ್ಲಿ ಆರೋಪಿ ತೊಡಗಿದ್ದ. ಸುಲಭವಾಗಿ ವಂಚಿಸಬಹುದಾದ ವ್ಯಕ್ತಿಗಳನ್ನು ಪತ್ತೆಹಚ್ಚುತ್ತಿದ್ದ. ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ಗಳಿಸಬಹುದು ಎಂಬುದಾಗಿ ನಂಬಿಸಿ ವಂಚಿಸುತ್ತಿದ್ದ. ಅಲ್ಲದೇ ತನಗೆ ರಾಜಕಾರಣಿಗಳ ಪರಿಚಯವಿದೆ. ಪ್ರಭಾವಿಗಳೂ ಗೊತ್ತು ಎಂದು ವಿವಿಧ ಆಮಿಷವೊಡ್ಡಿ, ಹಣ ಪಡೆದು ವಂಚಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಪೊಲೀಸರು ಬಂಧನಕ್ಕೆ ಬರುವ ಮಾಹಿತಿ ತಿಳಿದು, ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ವಂಚನೆಯಿಂದ ಬಂದ ಹಣದಿಂದಲೇ ಶ್ರೀಲಂಕಾ, ದುಬೈ ಸೇರಿದಂತೆ ವಿವಿಧ ದೇಶಗಳಲ್ಲಿ ಸುತ್ತಾಟ ನಡೆಸಿದ್ದ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.