
ಬೆಂಗಳೂರು: ‘ನರೇಗಾ ಯೋಜನೆ ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿಧಾನ ಮಂಡಲದ ವಿಶೇಷ ಅಧಿವೇಶನ ಕರೆಯಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗ್ರಾಮೀಣ ಕಾರ್ಮಿಕ ಉದ್ಯೋಗದ ಹಕ್ಕನ್ನು ರಕ್ಷಿಸಲು ರಾಷ್ಟ್ರವ್ಯಾಪಿ ‘ನರೇಗಾ ಬಚಾವೋ ಸಂಗ್ರಾಮ’ ಕಾರ್ಯಕ್ರಮ ಆಯೋಜಿಸಲು ಗುರುವಾರ ಹಮ್ಮಿಕೊಂಡಿದ್ದ ಸಚಿವರ, ಶಾಸಕರ ಸಭೆಯಲ್ಲಿ ಅವರು ಮಾತನಾಡಿದರು.
‘ನರೇಗಾ ಕಾಯ್ದೆ ಮತ್ತೆ ಜಾರಿಯಾಗವಂತೆ ಜನಾಂದೋಲನ ನಡೆಯಬೇಕು. ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರನ್ನು, ನರೇಗಾದಲ್ಲಿ ಕೆಲಸ ಮಾಡುತ್ತಿರುವವರನ್ನು ತಲುಪಬೇಕು. ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಶಾಸಕರು ಮಾಡಬೇಕು. ನಮ್ಮ ಹೋರಾಟ ಜನಾಂದೋಲನವಾಗಿ ರೂಪುಗೊಳ್ಳುವಂತಹ ವಾತಾವರಣ ನಿರ್ಮಾಣ ಆಗಬೇಕು’ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಜಾರಿಗೆ ತಂದ ಕಾರ್ಯಕ್ರಮವನ್ನು ರದ್ಧು ಮಾಡಿ ಉದ್ಯೋಗದ ಹಕ್ಕು ಕಸಿಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಇದು ಸಂವಿಧಾನ ಬಾಹಿರ ಕೆಲಸ ಎಂದು ಟೀಕಿಸಿದರು.
ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮಹಾತ್ಮಗಾಂಧಿ ನರೇಗಾ ಯೋಜನೆ ಜಾರಿಗೆ ಬಂತು. ದಲಿತರು, ಮಹಿಳೆಯರು, ರೈತರಿಗೆ ಉದ್ಯೋಗ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿತ್ತು. ವರ್ಷದಲ್ಲಿ ನೂರು ದಿನ ಉದ್ಯೋಗ ಅವಕಾಶ ನರೇಗಾದಲ್ಲಿ ಸಿಗುತ್ತಿತ್ತು ಎಂದು ವಿವರಿಸಿದರು.
ಉದ್ಯೋಗದ ಹಕ್ಕು ಕಿತ್ತುಕೊಳ್ಳುವ ಕೇಂದ್ರ ಸರ್ಕಾರದ ಕ್ರಮದಿಂದಾಗಿ 28 ಕೋಟಿ ದಲಿತರಿಗೆ ಅನ್ಯಾಯವಾಗಿದೆ. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಸಂಘ ಪರಿವಾರ ಸಹಿಸುವುದಿಲ್ಲ. ಮಹಾತ್ಮಗಾಂಧಿಯ ಹೆಸರು ತೆಗೆದು ಮತ್ತೊಮ್ಮೆ ಗಾಂಧೀಜಿಯನ್ನು ಕೊಲೆ ಮಾಡಲಾಗಿದೆ. ಇದು ಸಂಘ ಪರಿವಾರದವರು ಹೇಳಿ ಕೊಟ್ಟಿರುವ ಪಾಠ. ಇವರಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದರು.
ದೆಹಲಿಯಲ್ಲೇ ಕಾಮಗಾರಿ ತೀರ್ಮಾನ: ಡಿಕೆಶಿ
ನರೇಗಾ ಯೋಜನೆಯಡಿ ಕಾಮಗಾರಿ ಆಯ್ಕೆ ಮಾಡುವ ಅಧಿಕಾರ ಪಂಚಾಯಿತಿಗಳ ಬಳಿ ಇತ್ತು. ಈಗ ದೆಹಲಿಯಿಂದ ತೀರ್ಮಾನ ಆಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿ ಅಸಾಧ್ಯ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ಶೇ 4 ರಷ್ಟು ಅನುದಾನ ಭರಿಸಲು ಯಾವ ರಾಜ್ಯದಿಂದಲೂ ಸಾಧ್ಯವಿಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರ ತೀರ್ಮಾನ ಮಾಡುವ ಮುನ್ನ ರಾಜ್ಯಗಳ ಅಭಿಪ್ರಾಯ ಪಡೆಯಬೇಕಿತ್ತು’ ಎಂದರು. ‘ರಾಜ್ಯಗಳ ಅಭಿಪ್ರಾಯ ಪಡೆಯದೇ ಈ ತೀರ್ಮಾನ ಮಾಡಿರುವುದರ ವಿರುದ್ಧ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ಜತೆಗೆ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಪ್ರತಿ ಪಂಚಾಯಿತಿಯಲ್ಲಿ ಸಭೆ ನಡೆಸುತ್ತೇವೆ. ಪ್ರತಿ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಜನರಲ್ಲಿ ಅರಿವು ಮೂಡಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.