ADVERTISEMENT

ಹಾರ, ತುರಾಯಿ ನಿಷೇಧದ ಆದೇಶ ಉಲ್ಲಂಘಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ!

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 6:36 IST
Last Updated 5 ಸೆಪ್ಟೆಂಬರ್ 2021, 6:36 IST
'ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ' ಉದ್ಘಾಟನಾ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಮೈಸೂರು ಪೇಟ ತೊಡಿಸಲಾಯಿತು.
'ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ' ಉದ್ಘಾಟನಾ ಸಮಾರಂಭದಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಮೈಸೂರು ಪೇಟ ತೊಡಿಸಲಾಯಿತು.   

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ವೆಚ್ಚದ ಉಡುಗೊರೆಗಳನ್ನು ನೀಡುವುದನ್ನು ನಿಷೇಧಿಸಿದ ಆದೇಶವನ್ನು ಸ್ವತಃ ಉಲ್ಲಂಘಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದರು.

ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಹಾರ, ತುರಾಯಿ, ದುಬಾರಿ ಬೆಲೆಯ ಉಡುಗೊರೆ ನೀಡುವುದನ್ನು ನಿಷೇಧಿಸಿ ಮುಖ್ಯಮಂತ್ರಿಯವರು ಕೆಲ ದಿನಗಳ ಹಿಂದೆ ಆದೇಶ ಹೊರಡಿಸಿದ್ದರು. ಹಾರ, ತುರಾಯಿ ಬದಲಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬೇಕು ಎಂದು ಆದೇಶ ಹೊರಡಿಸಿದ್ದರು.

ಭಾನುವಾರ ನಡೆದ 'ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ' ಉದ್ಘಾಟನಾ ಸಮಾರಂಭದಲ್ಲಿ ಸ್ವತಃ ಮುಖ್ಯಮಂತ್ರಿಯವರೇ ರೇಷ್ಮೆ ಗೂಡುಗಳಿಂದ ತಯಾರಾದ ಬೃಹತ್ ಹಾರ, ಮೈಸೂರು ಪೇಟ, ಶಾಲು ಮತ್ತು ಬೆಳ್ಳಿಯ ಸ್ಮರಣಿಕೆಯೊಂದಿಗೆ ಸನ್ಮಾನಿತರಾದರು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನೂ ಇದೇ ರೀತಿ ಸನ್ಮಾನಿಸಲಾಯಿತು.

ADVERTISEMENT

ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ತೋಟಗಾರಿಕೆ ಸಚಿವ ಮುನಿರತ್ನ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಎಲ್ಲರನ್ನೂ ಸನ್ಮಾನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದರಾದ ಮುನಿಸ್ವಾಮಿ, ಡಾ.ಉಮೇಶ್ ಜಾಧವ್, ಈರಣ್ಣ ಕಡಾಡಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.