ಬೆಂಗಳೂರು: ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ 5 ವರ್ಷದ ಮಗು ಅಪಹರಣ ಪ್ರಕರಣವನ್ನು 24 ತಾಸಿನಲ್ಲಿ ಪೊಲೀಸರು ಭೇದಿಸಿದ್ದಾರೆ.
ನಗರದ ವಿಶ್ವೇಶ್ವರಯ್ಯ ಲೇಔಟ್‍ನಲ್ಲಿ ವಾಸವಾಗಿರುವ ರಾಯಚೂರು ಮೂಲದ ಸಿದ್ದಪ್ಪ, ವೀರಮ್ಮ ದಂಪತಿ ಅವರ ಐದು ವರ್ಷದ ಮಗು ಜೂನ್ 21 ರಂದು ನಾಪತ್ತೆಯಾಗಿತ್ತು.
ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರೂ ಮಗುವಿನ ಸುಳಿವು ದೊರೆಯದ ಕಾರಣ ಪಾಲಕರು ಪೊಲೀಸ್ ಠಾಣೆಗೆ ದೂರು ನೀಡಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆದರೆ, ಅಂದು ಬೆಸ್ಕಾಂ ಕಾಮಗಾರಿ ನಡೆಯುತ್ತಿರುವ ಕಾರಣ ಬೆಳಿಗ್ಗೆಯಿಂದ ಸಂಜೆವರೆಗೆ ಆ ಪ್ರದೇಶದಲ್ಲಿ ವಿದ್ಯುತ್ ಇಲ್ಲದ ಪರಿಣಾಮ ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸಿರಲಿಲ್ಲ.
ಶ್ವಾನದಳದ ನೆರವಿನೊಂದಿಗೆ ಪೊಲೀಸರು ಪತ್ತೆ ಕಾರ್ಯ ಆರಂಭಿಸಿದರು. ಮಗುವಿನ ಬಟ್ಟೆಯ ವಾಸನೆಯ ಜಾಡು ಹಿಡಿದು ಶೋಧಕಾರ್ಯ ಕೈಗೊಳ್ಳಲಾಯಿತು. ಶ್ವಾನವು ಮಗು ನಾಪತ್ತೆಯಾದ ಸ್ಥಳದಿಂದ ಅರ್ಧ ಕಿ.ಮೀ. ದೂರದ ಬಸಮ್ಮ ಎಂಬುವರ ಮನೆ ಬಳಿ ಕರೆದುಕೊಂಡು ಹೋಗಿತ್ತು.
‘ಬಸಮ್ಮಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗು ಕಳ್ಳತನದ ವಿಚಾರ ತಿಳಿಸಿದಳು. ರಾಯಚೂರು ಜಿಲ್ಲೆಯ ಬಸಮ್ಮ, ಮಗುವಿನ ತಂದೆ-ತಾಯಿ ಪರಿಚಿತಳು. ವಿಚಾರಣೆ ವೇಳೆ ಮಗು ಅಪಹರಿಸಿಕೊಂಡು ಹೋಗಿರುವ ವಿಷಯ ತಿಳಿಸಿದಳು. ಸದ್ಯ ರಾಯಚೂರಿನಲ್ಲಿ ಆರೋಪಿಗಳನ್ನು ಬಂಧಿಸಿ, ಮಗು ರಕ್ಷಣೆ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಮಗುವನ್ನು ನಗರಕ್ಕೆ ಕರೆತರುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಆರೋಪಿಗಳನ್ನು ನಗರಕ್ಕೆ ಕರೆತಂದ ಬಳಿಕ ವಿಚಾರಣೆಗೆ ಒಳಪಡಿಸಲಾಗುವುದು. ಬಳಿಕ ಕಾರಣ ಗೊತ್ತಾಗಲಿದೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಹೆಚ್ಚಿನ ಮಾಹಿತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.