ADVERTISEMENT

ಕಾವಲ್ ಭೈರಸಂದ್ರ ಬಳಿ 3 ವರ್ಷದ ಮಗು ಸಾವು: ತಾಯಿಯಿಂದಲೇ ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 16:10 IST
Last Updated 19 ಸೆಪ್ಟೆಂಬರ್ 2018, 16:10 IST
   

ಬೆಂಗಳೂರು: ಕಾವಲ್ ಭೈರಸಂದ್ರ ಬಳಿ ವರ್ಷಾ ಎಂಬಮೂರು ವರ್ಷದ ಮಗು ಮಂಗಳವಾರ ಮಧ್ಯಾಹ್ನ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ತಾಯಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಡಿ.ಜೆ.ಹಳ್ಳಿ ಪೊಲೀಸರು, ಮರಣೋತ್ತರ ಪರೀಕ್ಷೆ ಮಾಡಿಸಿ ಮಗುವಿನ ಶವವನ್ನು ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಬುಧವಾರ ಸಂಜೆ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಂದೆ ಮಂಜುನಾಥ್ ಹಾಗೂ ತಾಯಿ ಪ್ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

‘ಕೂಲಿ ಕಾರ್ಮಿಕರಾದ ಮಂಜುನಾಥ್, ಪತ್ನಿ ಪ್ರಿಯಾ ಹಾಗೂ ಮಗು ವರ್ಷಾ ಜೊತೆ ಕಾವಲ್ ಭೈರಸಂದ್ರ ಬಸ್‌ ತಂಗುದಾಣ ಸಮೀಪದಲ್ಲೇ ವಾಸವಿದ್ದರು. ಪ್ರಿಯಾ, ತರಕಾರಿ ಮಾರಾಟ ಮಾಡುತ್ತಿದ್ದರು. ಮನೆಯಲ್ಲೇ ಮಗು ಮೃತಪಟ್ಟಿದ್ದನ್ನು ತಿಳಿದ ಸ್ಥಳೀಯರು ಠಾಣೆಗೆ ಸುದ್ದಿ ಮುಟ್ಟಿಸಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

’ಕಳೆದ ತಿಂಗಳು ಮಗುವಿನ ಎಡಗಾಲು ಮುರಿದಿತ್ತು. ಅದಕ್ಕೆ ಬ್ಯಾಂಡೇಜ್ ಹಾಕಿಸಲಾಗಿತ್ತು. ಎರಡು ದಿನಗಳ ಹಿಂದೆ ಬಿಸಿ ನೀರು ಸಹ ಮೈಮೇಲೆ ಬಿದ್ದು ಗಾಯಗಳಾಗಿದ್ದವು. ಅದೇ ಸ್ಥಿತಿಯಲ್ಲೇ ಮಗು ಮೃತಪಟ್ಟಿದೆ. ಮರಣೋತ್ತರ ಪರೀಕ್ಷಾ ವರದಿ ಕೈಸೇರಿದ ಬಳಿಕವೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ’ ಎಂದರು.

ಹೆಣ್ಣೆಂದು ಹೊಡೆಯುತ್ತಿದ್ದರು: ‘ಹೆಣ್ಣು ಮಗು ಇಷ್ಟವಿಲ್ಲವೆಂದು ಕೂಗಾಡುತ್ತಿದ್ದ ಪ್ರಿಯಾ, ತನ್ನ ಮಗುವಿಗೆ ನಿತ್ಯವೂ ಹೊಡೆಯುತ್ತಿದ್ದರು. ಬಿಡಿಸಲು ಹೋದವರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಮಂಗಳವಾರ ಅವರೇ ಮಗುವಿಗೆ ಹೊಡೆದು ಕೊಂದಿರುವ ಅನುಮಾನವಿದೆ’ ಎಂದು ಸ್ಥಳೀಯರು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದರು.

‘ಪ್ರಿಯಾ ಅವರು 8 ತಿಂಗಳ ಗರ್ಭಿಣಿ. ಅವರೇ ಮಗು ಕೊಂದಿದ್ದಾರೆ ಎಂಬುದಕ್ಕೆ ಸ್ಥಳೀಯರ ಹೇಳಿಕೆ ಬಿಟ್ಟರೇ ಯಾವುದೇ ಪುರಾವೆಗಳು ಸಿಕ್ಕಿಲ್ಲ’ ಎಂದು ಹೇಳಿದರು.

‘ಕಾಲು ಮುರಿತ ಹಾಗೂ ಮೈ ಮೇಲಿನ ಗಾಯದಿಂದ ಮಗುವಿನ ಆರೋಗ್ಯ ಹದಗೆಟ್ಟಿತ್ತು. ಪೋಷಕರು, ಸೂಕ್ತ ಚಿಕಿತ್ಸೆ ಕೊಡಿಸಿರಲಿಲ್ಲ. ಆ ಕಾರಣಕ್ಕೂ ಅದು ಅಸುನೀಗಿರುವ ಅನುಮಾನವಿದೆ. ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.