ಬೆಂಗಳೂರು: ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ವಿಚಾರಣೆ ವಿಳಂಬವಾಗುವುದನ್ನು ತಪ್ಪಿಸಬೇಕು. ಜೊತೆಗೆ ನೀತಿಗಳನ್ನು ಗಟ್ಟಿಗೊಳಿಸಿ ಕರ್ನಾಟಕ ಮಾದರಿ ರೂಪಿಸಲು ಎಲ್ಲ ಭಾಗಿದಾರರು ಪ್ರಯತ್ನಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಸೂಚಿಸಿದರು.
‘ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ರಕ್ಷಣೆ: ಭಾರತದಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣ’, ‘ಪೋಕ್ಸೊ ಕಾಯ್ದೆ: ಪ್ರಗತಿ, ಸವಾಲುಗಳು, ಅವಕಾಶಗಳು ಹಾಗೂ ಭವಿಷ್ಯದ ಹಾದಿ’ ಬಗ್ಗೆ ಕರ್ನಾಟಕ ಹೈಕೋರ್ಟ್ ಬಾಲಾಪರಾಧಿ ನ್ಯಾಯ ಸಮಿತಿ, ಪೋಕ್ಸೊ ಸಮಿತಿಯು ಗೃಹ, ಕಾನೂನು ಇಲಾಖೆ, ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ಭಾಗಿದಾರರ ಸಮಾಲೋಚನೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ 14,15, 21ನೇ ವಿಧಿ ಅಡಿಯಲ್ಲಿ ಹೆಣ್ಣು ಮಗುವಿನ ಘನತೆ ಬದುಕಿಗೆ ಒತ್ತು ನೀಡಲಾಗಿದೆ. ಕಾನೂನಿನ ಬಲದ ಜತೆಗೆ ಸಮಾಜದ ಗೌರವವೂ ಬೇಕಾಗುತ್ತದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಆಗುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಕೆಳ ಹಂತದಲ್ಲಿಯೇ ಸಮಾಜದಲ್ಲಿ ಮಕ್ಕಳಿಗೆ ಭಯ ಮುಕ್ತ ವಾತಾವರಣ ನಿರ್ಮಿಸಬೇಕು. ಕಾನೂನು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಸಂತ್ರಸ್ತರ ಆರೋಗ್ಯಕ್ಕೆ ಒತ್ತು ನೀಡಿ, ಮನೋಬಲ ಹೆಚ್ಚಿಸುವ ಕಡೆಗೂ ಗಮನ ನೀಡಬೇಕು. ತ್ವರಿತ ರಕ್ಷಣೆ, ಪುನರ್ವಸತಿಯನ್ನು ಸಮರ್ಪಕವಾಗಿ ಒದಗಿಸಬೇಕು. ಪೋಕ್ಸೊ ಹಾಗೂ ಬಾಲಾಪರಾಧಿ ನ್ಯಾಯ ಕಾಯ್ದೆ, ಪ್ರತ್ಯೇಕ ನ್ಯಾಯಾಲಯಗಳಿದ್ದರೂ ದೌರ್ಜನ್ಯದ ಪ್ರಮಾಣ ತಗ್ಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈಗ ಡಿಜಿಟಲ್ ಹಾಗೂ ಆನ್‌ಲೈನ್ ಮೂಲಕ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಮಕ್ಕಳು ಸುಲಭವಾಗಿ ಡಿಜಿಟಲ್ ಬಲೆಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಾರೆ. ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಹೈಕೋರ್ಟ್ ಬಾಲಾಪರಾಧಿ ನ್ಯಾಯ ಹಾಗೂ ಪೋಕ್ಸೊ ಸಮಿತಿ ಅಧ್ಯಕ್ಷ ನ್ಯಾ. ಎಸ್. ಸುನಿಲ್ ದತ್ತ ಯಾದವ್, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷೆ ನ್ಯಾ. ಅನು ಸಿವರಾಮನ್, ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷೆ ನ್ಯಾ. ಕೆ.ಎಸ್. ಮುದಗಲ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮಕ್ಕಳ ಆಯೋಗದ ಅಧ್ಯಕ್ಷ ಕೆ. ನಾಗಣ್ಣ ಗೌಡ, ಮಕ್ಕಳ ಹಕ್ಕುಗಳ ತಜ್ಞ ಸೋನಿ ಕುಟ್ಟಿ ಜಾರ್ಜ್ ಹಾಜರಿದ್ದರು.
ಮನೆಯಲ್ಲಿ ಮಾತ್ರವಲ್ಲದೇ ಶಾಲೆ ಸಮುದಾಯದಲ್ಲೂ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಸುರಕ್ಷಿತವಾಗಿರುವ ನಿಟ್ಟಿನಲ್ಲಿ ಜನರನ್ನು ಜಾಗೃತಿಗೊಳಿಸುವ ಪ್ರಕ್ರಿಯೆಗಳು ಹೆಚ್ಚಬೇಕುವಿಭು ಖಭ್ರು ಮುಖ್ಯ ನ್ಯಾಯಮೂರ್ತಿ ಕರ್ನಾಟಕ ಹೈಕೋರ್ಟ್
ವೆಬ್‌ಸೈಟ್ ಅನಾವರಣ
ಹೈಕೋರ್ಟ್‌ನ ಬಾಲಾಪರಾಧಿ ನ್ಯಾಯ ಸಮಿತಿ ಹಾಗೂ ಪೋಕ್ಸೊ ಸಮಿತಿಯ ಎಲ್ಲ ಮಾಹಿತಿಗಳಿರುವ ವೆಬ್‌ಸೈಟ್ ಅನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಜನಾರ್ಪಣೆಗೊಳಿಸಿದರು. ವೆಬ್‌ಸೈಟ್ judiciary.karnataka.gov.in/jjb ನಲ್ಲಿ ಬಾಲ ನ್ಯಾಯ ಪ್ರಕರಣ ಪೋಕ್ಸೊಗೆ ಸಂಬಂಧಿಸಿದ ಮಾಹಿತಿಗಳು ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.