ನಮ್ಮ ಮೆಟ್ರೊ
ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದಲ್ಲಿ ಶನಿವಾರ ತಾಯಿಯಿಂದ ಮಗು ಬೇರ್ಪಟ್ಟಿದ್ದರಿಂದ ಸ್ವಲ್ಪ ಕಾಲ ಆತಂಕದ ಸನ್ನಿವೇಶ ಸೃಷ್ಟಿಯಾಯಿತು. ಆ ನಂತರ ಮಗು ಸುರಕ್ಷಿತವಾಗಿ ತಾಯಿ ಮಡಿಲನ್ನು ಸೇರಿತು.
ಮೈಸೂರು ರಸ್ತೆ ಕಡೆಯಿಂದ ತಾಯಿ ಮತ್ತು ಸುಮಾರು 5 ವರ್ಷದ ಮಗು ಮಧ್ಯಾಹ್ನ 1.30ರ ಸುಮಾರಿಗೆ ಮೆಟ್ರೊ ಹತ್ತಿದ್ದರು. ಮಾಗಡಿ ರಸ್ತೆಯಲ್ಲಿ ಇಳಿಯಬೇಕಿತ್ತು. ಮಾಗಡಿ ರಸ್ತೆ ನಿಲ್ದಾಣದಲ್ಲಿ ಮೆಟ್ರೊ ನಿಂತಾಗ ಹತ್ತುವವರು ಒಮ್ಮೆಲೇ ನುಗ್ಗಿದ್ದರಿಂದ ತಾಯಿ ಇಳಿದು ಮಗು ಇಳಿಯುವ ಮೊದಲೇ ಮೆಟ್ರೊ ಬಾಗಿಲು ಮುಚ್ಚಿ ಮುಂದಕ್ಕೆ ಚಲಿಸಿತು. ಮಗು ಜೋರಾಗಿ ಅಳತೊಡಗಿತು. ‘ಮಗುವನ್ನು ಮುಂದಿನ ನಿಲ್ದಾಣದಲ್ಲಿ ಇಳಿಸುತ್ತೇವೆ, ಬನ್ನಿ’ ಎಂದು ಪ್ರಯಾಣಿಕರು ತಾಯಿಗೆ ಸೂಚನೆ ನೀಡಿದರು.
‘ತಾಯಿಯಿಂದ ಬೇರ್ಪಟ್ಟ ಮಗು ಜೋರಾಗಿ ಅಳತೊಡಗಿದಾಗ, ಸಹ ಪ್ರಯಾಣಿಕರು ಸಮಾಧಾನ ಪಡಿಸಿದರು. ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಿಲ್ದಾಣದಲ್ಲಿ ಯುವಕನೊಬ್ಬ ಮಗುವಿನೊಂದಿಗೆ ಇಳಿದು, ಅಲ್ಲಿದ್ದ ಮೆಟ್ರೊ ಸಿಬ್ಬಂದಿಗೆ ಮಾಹಿತಿ ನೀಡಿದರು. ಮಗುವಿನ ಕುತ್ತಿಗೆಯಲ್ಲಿದ್ದ ಗುರುತಿನ ಚೀಟಿಯಲ್ಲಿ ಮೊಬೈಲ್ ನಂಬರ್ ಇದ್ದರೂ ಆ ನಂಬರ್‌ಗೆ ಕರೆ ಮಾಡಿದಾಗ ಯಾರೂ ಸ್ವೀಕರಿಸಲಿಲ್ಲ. ತಾಯಿ ಬರುವವರೆಗೆ ಕಾದು ಮಗುವನ್ನು ಸುರಕ್ಷಿತವಾಗಿ ಅವರಿಗೆ ಮುಟ್ಟಿಸಿದರು’ ಎಂದು ಮೆಟ್ರೊ ಪ್ರಯಾಣಿಕರೊಬ್ಬರು ತಿಳಿಸಿದರು.
‘ಮಗು ಸುರಕ್ಷಿತವಾಗಿ ತಾಯಿಯನ್ನು ಸೇರಿಕೊಂಡಿದೆ’ ಎಂದು ನಮ್ಮ ಮೆಟ್ರೊ ಅಧಿಕಾರಿಗಳು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.