ADVERTISEMENT

ಬೆಂಗಳೂರು | ಮಕ್ಕಳ ಚೆಸ್‌ ಪಂದ್ಯಾವಳಿ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 15:51 IST
Last Updated 8 ಜನವರಿ 2024, 15:51 IST
ಚಿಣ್ಣರ ಚೆಸ್‌ ಪಂದ್ಯಾವಳಿಯನ್ನು ವೀಕ್ಷಿಸಿದ ಉಪೇಂದ್ರ ಶೆಟ್ಟಿ ಮತ್ತು ಸುದರ್ಶನ ಚನ್ನಂಗಿಹಳ್ಳಿ.
ಚಿಣ್ಣರ ಚೆಸ್‌ ಪಂದ್ಯಾವಳಿಯನ್ನು ವೀಕ್ಷಿಸಿದ ಉಪೇಂದ್ರ ಶೆಟ್ಟಿ ಮತ್ತು ಸುದರ್ಶನ ಚನ್ನಂಗಿಹಳ್ಳಿ.   

ಬೆಂಗಳೂರು: ಯುನಿವರ್ಸಲ್‌ ಫಸ್ಟ್‌ ಏಜ್‌ ರಾಜ್ಯಮಟ್ಟದ ಮಕ್ಕಳ ಚೆಸ್ ಪಂದ್ಯಾವಳಿ ಭಾನುವಾರ ಯಶಸ್ವಿಯಾಗಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಇನ್ನೂರಕ್ಕೂ ಹೆಚ್ಚು ಪುಟಾಣಿ ವಿದ್ಯಾರ್ಥಿ ಚೆಸ್‌ ಆಟಗಾರರು ತಮ್ಮ ಚದುರಂಗದ ಚತುರತೆಯನ್ನು ಒರೆಗೆ ಹೆಚ್ಚಿದರು.

ರಾಮೋಹಳ್ಳಿಯ ಗುರುರಾಯನಪುರದ ಬಳಿ ಇರುವ ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಕಾಲೇಜಿನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಯೂನಿವರ್ಸಲ್‌ ಸ್ಕೂಲ್‌ ಆಫ್‌ ಅಡ್ಮಿನಿಸ್ಟ್ರೇಷನ್‌ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ‘ಮುಂದಿನ ಹಂತದಲ್ಲಿ ಜೂನ್‌–ಜುಲೈ ತಿಂಗಳಲ್ಲಿ ಯೂನಿವರ್ಸಲ್‌ ಅಂತರರಾಷ್ಟ್ರೀಯ ಮಕ್ಕಳ ಚೆಸ್‌ ಪಂದ್ಯಾವಳಿ ಆಯೋಜಿಸುವ ಉದ್ದೇಶವಿದೆ. ಇದು ವಿಶ್ವದ ವಂಡರ್‌ ಕಿಡ್‌ ಉದಯೋನ್ಮಖ ಚೆಸ್‌ ಆಟಗಾರರ ರೋಚಕ ಪೈಪೋಟಿಗೆ ಸಾಕ್ಷಿಯಾಗಲಿದೆ’ ಎಂದು ತಿಳಿಸಿದರು.

ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ‘ಚೆಸ್‌ ಬುದ್ಧಿವಂತರ ಆಟವಾಗಿದ್ದು, ಮಕ್ಕಳು ಇಂತಹ ಆಟಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರ ಮೂಲಕ ಬುದ್ಧಿಮತ್ತೆಯನ್ನು ಹೆಚ್ಚಿಸಿಕೊಳ್ಳಬೇಕು. ಚೆಸ್ ಅಪ್ಪಟ ಭಾರತೀಯ ಆಟ. ಇದನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ ಜ. 18ರಿಂದ 26ರವರೆಗೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಚೊಚ್ಚಲ ಅಂತರರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಪಂದ್ಯಾವಳಿಯ 'ಮಾಸ್ಕಟ್' ಅನಾವರಣಗೊಳಿಸಲಾಯಿತು.

ಕರ್ನಾಟಕ ರಾಜ್ಯ ಚೆಸ್‌ ಸಂಸ್ಥೆಯ ಅರವಿಂದ ಶಾಸ್ತ್ರಿ, ಕೆಡಿಸಿಎ ಸಂಸ್ಥಾಪಕ ಅಧ್ಯಕ್ಷ ಜಯಪಾಲ ಚಂದಾಡಿ, ಬೆಂಗಳೂರು ನಗರ ಜಿಲ್ಲಾ ಚೆಸ್‌ ಅಸೋಸಿಯೇಷನ್‌ ಅಧ್ಯಕ್ಷೆ ಸೌಮ್ಯ ಎಂ.ವಿ., ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.