ADVERTISEMENT

ದೇವಸ್ಥಾನದಲ್ಲಿ ಮಕ್ಕಳ ಸರ ಕದಿಯುತ್ತಿದ್ದಳು!

ಬನಶಂಕರಿ ಸನ್ನಿಧಿಯಲ್ಲಿ ಯಲ್ಲಮ್ಮನ ಬಂಧನ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 19:13 IST
Last Updated 21 ನವೆಂಬರ್ 2018, 19:13 IST
ಯಲ್ಲಮ್ಮ
ಯಲ್ಲಮ್ಮ   

ಬೆಂಗಳೂರು: ಭಕ್ತೆಯ ಸೋಗಿನಲ್ಲಿ ಪ್ರತಿ ಶುಕ್ರವಾರ ಬನಶಂಕರಿ ದೇವಸ್ಥಾನಕ್ಕೆ ಹೋಗಿ, ಮಕ್ಕಳ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಬಿಚ್ಚಿಕೊಂಡು ಪರಾರಿಯಾಗುತ್ತಿದ್ದ ಯಲ್ಲಮ್ಮ (45) ಎಂಬುವರು ಕುಮಾರಸ್ವಾಮಿ ಲೇಔಟ್‌ ಪೊಲೀಸರ ಅತಿಥಿಯಾಗಿದ್ದಾರೆ.

ಗದಗ ಜಿಲ್ಲೆಯ ಯಲ್ಲಮ್ಮ, ಸಾಕುಮಗ ಮಂಜುನಾಥ್ ಜತೆ ನಾಗರಬಾವಿಯಲ್ಲಿ ನೆಲೆಸಿದ್ದರು. ಕಳವು ಪ್ರಕರಣದಲ್ಲಿ ಹಿಂದೆ ತ್ಯಾಗರಾಜನಗರ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಯಲ್ಲಮ್ಮ, ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಚಾಳಿ ಮುಂದುವರಿಸಿದ್ದರು. ಅವರಿಂದ 197 ಗ್ರಾಂನ ಏಳು ಸರಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು
ಹೇಳಿದರು.

ಶುಕ್ರವಾರವೇ ಏಕೆ?: ಬನಶಂಕರಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹೀಗಾಗಿ, ಅದೇ ದಿನ ಕಾರ್ಯಾಚರಣೆಗೆ ಇಳಿಯುವ ಯಲ್ಲಮ್ಮ, ಮಕ್ಕಳನ್ನು ಎತ್ತಿಕೊಂಡು ನೂಕು–ನುಗ್ಗಲಿನಲ್ಲಿ ಕಷ್ಟ ಪಡುತ್ತಿರುವ ಮಹಿಳೆಯರನ್ನು ಗುರುತಿಸಿಕೊಳ್ಳುತ್ತಾರೆ. ಬಳಿಕ ನೆರವಾಗುವ ನೆಪದಲ್ಲಿ ಹತ್ತಿರ ಹೋಗಿ, ಮಹಿಳೆಗೆ ಗೊತ್ತಾಗದಂತೆ ಮಗುವಿನ ಸರ ಬಿಚ್ಚಿಕೊಂಡು ಹೊರನಡೆಯುತ್ತಾರೆ.

ADVERTISEMENT

‘ಮಕ್ಕಳ ಸರ ದೋಚಿದ ಸಂಬಂಧ ನಮ್ಮ ಠಾಣೆಯಲ್ಲೇ ಎಂಟು ಪ್ರಕರಣಗಳು ದಾಖಲಾಗಿದ್ದವು. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಕೃತ್ಯ ಎಸಗುತ್ತಿರುವುದು ಮಹಿಳೆ ಎಂಬುದು ಖಾತರಿಯಾಯಿತು. ಎಲ್ಲ ಕಳ್ಳತನಗಳೂ ಶುಕ್ರವಾರವೇ ನಡೆದಿದ್ದರಿಂದ, ಪ್ರತಿ ವಿಶೇಷ ಪೂಜೆಯ ದಿನ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಮಫ್ತಿಯಲ್ಲಿ ದೇವಸ್ಥಾನಕ್ಕೆ ಕಳುಹಿಸುತ್ತಿದ್ದೆವು. ನಮ್ಮ ಸಿಬ್ಬಂದಿ ಭಕ್ತೆಯರಂತೆಯೇ ಆವರಣದಲ್ಲಿ ಓಡಾಡಿಕೊಂಡಿದ್ದಾಗ, ಇತ್ತೀಚೆಗೆ ಯಲ್ಲಮ್ಮ ಸಿಕ್ಕಿಬಿದ್ದರು’ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ಮಾಹಿತಿ ನೀಡಿದರು.

ಮೂತ್ರ ಮಾಡಿ ರಂಪಾಟ: ‘ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಠಾಣೆಯಲ್ಲೇ ಮೂತ್ರ ಮಾಡಿ ರಂಪಾಟ ಮಾಡಿದ ಯಲ್ಲಮ್ಮ, ‘ನನಗೆ ಸಕ್ಕರೆ ಕಾಯಿಲೆ ಇದೆ. ಬಿ.ಪಿ ಇದೆ. ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳಲುತ್ತಿದ್ದೇನೆ. ನನಗೆ ಏನಾದರೂ ಆದರೆ, ಅದಕ್ಕೆ ನೀವೇ ಹೊಣೆ’ ಎಂದು ಹೆದರಿಸಿದರು. ಹಿಂದೆ, ತ್ಯಾಗರಾಜನಗರ ಪೊಲೀಸರು ಬಂಧಿಸಿದ್ದಾಗಲೂ ಇದೇ ರೀತಿ ನಾಟಕ ಮಾಡಿದ್ದರು. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡರು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.