ಬೆಂಗಳೂರು: ‘ಮಕ್ಕಳು ದೇವರ ಸಮಾನ, ಅವರ ಮನಸ್ಸಿನಲ್ಲಿ ಕೆಟ್ಟ ಚಿಂತನೆ ಇರುವುದಿಲ್ಲ. ಜಾತಿ, ಮತ, ಪಂಥದ ಭೇದವಿರುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ರಕ್ಷಾ ಫೌಂಡೇಷನ್‌ನ 13ನೇ ವಾರ್ಷಿಕೋತ್ಸವದಲ್ಲಿ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿಯರಿಗೆ ಉಚಿತವಾಗಿ ಎರಡು ಲಕ್ಷ ನೋಟ್ ಪುಸ್ತಕಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಅನಾಥ ಆಶ್ರಮದ ವಿದ್ಯಾರ್ಥಿಗಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದಶಕಗಳಿಂದ ಸಿ.ಕೆ. ರಾಮಮೂರ್ತಿ ಅವರ ನೇತೃತ್ವದಲ್ಲಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಸಹಕಾರ ನೀಡಲಾಗುತ್ತಿದೆ. ಸಾಧನೆ ಇಲ್ಲದೇ ಹೋದರೆ ಸಾವಿಗೆ ಅರ್ಥವಿಲ್ಲ. ಹುಟ್ಟಿದ ಮೇಲೆ ಸಾಧನೆ ಮಾಡಿ ನಿಲ್ಲಬೇಕು’ ಎಂದು ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ‘ಗುರುಗಳು ಪಾಠ ಮಾಡುತ್ತಾರೆ, ತಂದೆ, ತಾಯಿ ಹೇಳಿಕೊಡುತ್ತಾರೆ. ಆದರೆ ಪರೀಕ್ಷೆಯನ್ನು ನಾವೇ ಬರೆಯಬೇಕು. ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆದು ಉತ್ತಮ ಅಂಕಗಳಿಸಿದರೆ ಜೀವನದಲ್ಲಿ ಸಾಧನೆ ಮಾಡಬಹುದು’ ಎಂದರು.
‘ವಿದ್ಯಾವಂತರಾದರೆ ಸಮಾಜದಲ್ಲಿ ಗೌರವ, ಮಾನ್ಯತೆ ಸಿಗುತ್ತದೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ವಿದ್ಯಾವಂತರಾಗಬೇಕು. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಎಂದು ರಕ್ಷಾ ಫೌಂಡೇಷನ್ ಉಚಿತ ನೋಟ್ ಪುಸ್ತಕ ಮತ್ತು ಉನ್ನತ ವ್ಯಾಸಂಗದ ನೆರವು ನೀಡಲಾಗುತ್ತಿದೆ’ ಎಂದು ಶಾಸಕ ಸಿ.ಕೆ. ರಾಮಮೂರ್ತಿ ತಿಳಿಸಿದರು.
ಜಯದೇವ ಆಸ್ಪತ್ರೆಗೆ ₹2 ಲಕ್ಷ ದೇಣಿಗೆಯನ್ನು ಜಯದೇವ ಆಸ್ಪತ್ರೆ ನಿರ್ದೇಶಕ ರವೀಂದ್ರನಾಥ್ ಅವರಿಗೆ ಬಿಬಿಎಂಪಿ ಮಾಜಿ ಸದಸ್ಯೆ ನಾಗರತ್ನ ರಾಮಮೂರ್ತಿ ನೀಡಿದರು.
ಶಾಸಕ ಉದಯ್ ಗರುಡಾಚಾರ್, ನಟರಾದ ಪ್ರಥಮ್, ವಸಿಷ್ಠ ಸಿಂಹ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.