
ಬೆಂಗಳೂರು: ‘ಇಂಗ್ಲಿಷ್ ಮಾಧ್ಯಮ ವಿಜೃಂಭಿಸುತ್ತಿರುವಾಗ ವಚನಗಳ ಸ್ಪರ್ಧೆ ಮೂಲಕ ಕನ್ನಡ ಭಾಷೆ, ಸಂಸ್ಕೃತಿಯನ್ನು ಬಿತ್ತುವ ಮಕ್ಕಳ ವಚನ ಮೇಳ ರಾಜ್ಯದ ಎಲ್ಲೆಡೆ ನಡೆಯಲಿ’ ಎಂದು ಶರಣ ಸೇವಾ ಸಮಾಜದ ಅಧ್ಯಕ್ಷ ಎಂ.ಎಸ್. ನಟರಾಜ್ ಹೇಳಿದರು.
ವಚನಜ್ಯೋತಿ ಬಳಗವು ಕಲಾಗ್ರಾಮದಲ್ಲಿ ಆಯೋಜಿಸಿರುವ ಏಳು ದಿನಗಳ ಮಕ್ಕಳ ವಚನ ಮೇಳವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವಚನಗಳನ್ನು ತಮ್ಮ ತೊದಲು ನುಡಿಯಲ್ಲಿ ಹೇಳುವುದನ್ನು ಮತ್ತು ಸಾವಿರಾರು ಮಕ್ಕಳ ವಚನ ಕಲರವ ಆಲಿಸುವುದೇ ಬಹು ಚೆಂದ ಎಂದು ವಚನಜ್ಯೋತಿ ಬಳಗದ ಸಾಹಸವನ್ನು ಪ್ರಶಂಸಿದರು.
ವಚನ ಗಾಯನದಿಂದ ಆರಂಭವಾಗಿ ವಚನ ವೇಷಭೂಷಣದವರೆಗೆ 12 ಸ್ಪರ್ಧೆಗಳಲ್ಲಿ 150ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿರುವ ಮಕ್ಕಳ ವಚನ ಮೇಳವು ರಾಜಧಾನಿಯ ವಿಶಿಷ್ಟ ಸಾಂಸ್ಕೃತಿಕ ಉತ್ಸವ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.
ಮಕ್ಕಳ ವಚನ ಮೇಳದ ಸಮಾರೋಪವು ರವೀಂದ್ರ ಕಲಾಕ್ಷೇತ್ರದಲ್ಲಿ ಜನವರಿ 10ರಂದು ನಡೆಯಲಿದ್ದು, ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಂಸಾಪತ್ರ ನೀಡಲಾಗುವುದು ಎಂದರು.
ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ. ಹೊನ್ನಲಿಂಗಯ್ಯ, ಬಳಗದ ರುದ್ರಪ್ಪ ದೇಸಾಯಿ, ಪ್ರಭು ಇಸುವನಹಳ್ಳಿ, ರಾಜಾ ಗುರುಪ್ರಸಾದ್, ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಮಧು, ಗಂಗಾಧರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.