
ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಚೀಟಿ ವ್ಯವಹಾರದಲ್ಲಿ ನಷ್ಟಕ್ಕೆ ಒಳಗಾದ ಟ್ರಾವೆಲ್ಸ್ ಕಂಪನಿ ಮಾಲೀಕ, ಕೋದಂಡರಾಮಪುರದ ನಿವಾಸಿ ವೆಂಕಟೇಶ್(51) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಂಪನಿ ಕಚೇರಿಯಲ್ಲಿ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡು ಸ್ಥಳೀಯರು ಬುಧವಾರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು, ಕಚೇರಿಯ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ವೆಂಕಟೇಶ್ ಅವರು ಬಿಜೆಪಿ ಕಾರ್ಯಕರ್ತರಾಗಿದ್ದರು. ವಿನಾಯಕ ವೃತ್ತದಲ್ಲಿ ಟ್ರಾವೆಲ್ಸ್ ಕಂಪನಿ ಸಹ ನಡೆಸುತ್ತಿದ್ದರು.
‘ಆರು ಮಂದಿ ಸ್ನೇಹಿತರೊಂದಿಗೆ ವೆಂಕಟೇಶ್ ಅವರು ಚೀಟಿ ವ್ಯವಹಾರ ನಡೆಸುತ್ತಿದ್ದರು. ಕೆಲವರು ಚೀಟಿ ಹಣ ಪಡೆದುಕೊಂಡು ವಾಪಸ್ ಮಾಡಿರಲಿಲ್ಲ. ಇದರಿಂದ ವೆಂಕಟೇಶ್ ಅವರು ನಷ್ಟಕ್ಕೆ ಒಳಗಾಗಿದ್ದರು. ಹಣ ಹೊಂದಿಸಲು ಸಾಧ್ಯವಾಗದೇ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ₹70 ಲಕ್ಷ ಸಾಲವಿತ್ತು’ ಎಂದು ಮೂಲಗಳು ಹೇಳಿವೆ.
ಆತ್ಮಹತ್ಯೆಗೂ ಮುನ್ನ ವಿಡಿಯೊ: ನ.9ರಂದು ಟ್ರಾವೆಲ್ಸ್ ಕಚೇರಿಗೆ ಬಂದಿದ್ದ ವೆಂಕಟೇಶ್ ಅವರು ಫ್ಯಾನ್‌ಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮೊದಲು ಕೆಲವು ನಿಮಿಷ ಸೆಲ್ಫಿ ವಿಡಿಯೊ ಮಾಡಿರುವ ವೆಂಕಟೇಶ್ ಅವರು, ‘ಚೀಟಿ ವ್ಯವಹಾರ ನಡೆಸುವಾಗ ಎಚ್ಚರಿಕೆಯಿಂದ ಇರಿ; ಕಷ್ಟದಲ್ಲಿ ಯಾರೂ ಬರುವುದಿಲ್ಲ. ಅದರಲ್ಲೂ ಹಣ ಕೊಡಬೇಕೆಂದರೆ ಯಾರೂ ಸಹಾಯ ಮಾಡುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ.
ಆತ್ಮಹತ್ಯೆ ಪ್ರಕರಣದ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.