ADVERTISEMENT

ಉ.ಕ ಭಾಗದಲ್ಲಿ ಸಿಕೆಪಿ ಶಾಖೆ ಪ್ರಾರಂಭಿಸುವುದಾದರೆ ಅಗತ್ಯ ಸ್ಥಳಾವಕಾಶ: HK ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಜನವರಿ 2025, 16:00 IST
Last Updated 4 ಜನವರಿ 2025, 16:00 IST
ಎಚ್.ಕೆ ಪಾಟೀಲ
ಎಚ್.ಕೆ ಪಾಟೀಲ   

ಬೆಂಗಳೂರು: ‘ಕರ್ನಾಟಕ ಚಿತ್ರಕಲಾ ಪರಿಷತ್ತಿನ (ಸಿಕೆಪಿ) ಶಾಖೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾರಂಭಿಸುವುದಾದರೆ ಅಗತ್ಯ ಸ್ಥಳಾವಕಾಶ ಒದಗಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು. 

ಕರ್ನಾಟಕ ಚಿತ್ರಕಲಾ ಪರಿಷತ್ತು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಐವರು ಕಲಾವಿದರಿಗೆ ‘ಚಿತ್ರಕಲಾ ಸಮ್ಮಾನ್ ಪ್ರಶಸ್ತಿ’ ಪ್ರದಾನ ಮಾಡಿ, ಮಾತನಾಡಿದರು. 

‘ಚಿತ್ರಕಲಾ ಪರಿಷತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಕಾರ್ಯವ್ಯಾಪ್ತಿ ವಿಸ್ತರಿಸಲು ಶಾಖೆಗಳನ್ನು ಪ್ರಾರಂಭಿಸುವುದಾದರೆ ಗದಗದಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಗದಗವು ಸಂಗೀತ ಸೇರಿ ವಿವಿಧ ಕಲೆಗಳಿಗೆ ಕೊಡುಗೆ ನೀಡಿದೆ. ಆದ್ದರಿಂದ ಪರಿಷತ್ತಿನ ಶಾಖೆ ಪ್ರಾರಂಭಕ್ಕೆ ಗದಗ ಅರ್ಹವಾಗಿದೆ’ ಎಂದು ಹೇಳಿದರು. 

ADVERTISEMENT

‘ಪರಿಷತ್ತು ಕಲಾವಿದರಿಗೆ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆಗಳನ್ನು ನಿರ್ಮಿಸಿಕೊಡುವ ಜತೆಗೆ ಯಾವುದೇ ಶುಲ್ಕ ಪಡೆಯದೇ ಮಾರಾಟಕ್ಕೂ ಅವಕಾಶ ನೀಡುತ್ತಿದೆ. ಕಲೆ ಹಾಗೂ ಕಲಾವಿದರ ಪ್ರೋತ್ಸಾಹಕ್ಕೆ ಇದು ಸಹಕಾರಿಯಾಗಿದೆ. ಚಿತ್ರಕಲಾ ಪರಿಷತ್ತನ್ನು ಪ್ರವಾಸಿ ತಾಣವಾಗಿ ಗುರುತಿಸಲಾಗಿದೆ. ಇಲ್ಲಿಗೆ ಈ ಹಿಂದೆ ಇದ್ದ ಇಲಾಖೆಯ ಬಸ್ ಸೇವೆಯನ್ನು ಪುನಃ ಪ್ರಾರಂಭಿಸಲಾಗುತ್ತದೆ. ಚಿತ್ರಸಂತೆಗೂ ಇಲಾಖೆ ವತಿಯಿಂದ ಅಗತ್ಯ ಪ್ರೋತ್ಸಾಹ ನೀಡಲಾಗುವುದು’ ಎಂದು ಭರವಸೆ ನೀಡಿದರು. 

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘ಪರಿಷತ್ತಿನ ಶಾಖೆಯನ್ನು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಾರಂಭಿಸಲು ಸರ್ಕಾರ ನೆರವು ಒದಗಿಸಬೇಕಿದೆ. ಶಿಗ್ಗಾವಿ, ಕಲಬುರಗಿ, ಬಾಗಲಕೋಟೆಯಲ್ಲಿಯೂ ಶಾಖೆ ಪ್ರಾರಂಭಿಸಬೇಕೆಂಬ ಪ್ರಸ್ತಾವವಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶಾಖೆ ಪ್ರಾರಂಭಿಸುವ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ’ ಎಂದರು. 

‘ಈ ಬಾರಿಯ ಚಿತ್ರಸಂತೆಗೆ 3 ಸಾವಿರಕ್ಕೂ ಅಧಿಕ ಕಲಾವಿದರು ಅರ್ಜಿ ಸಲ್ಲಿಸಿದ್ದರು. ಅಷ್ಟು ಮಂದಿಗೆ ಭೌತಿಕ ಪ್ರದೇಶಕ್ಕೆ ಅವಕಾಶ ಕಲ್ಪಿಸುವುದು ಕಷ್ಟಸಾಧ್ಯವಾದ್ದರಿಂದ ಆನ್‌ಲೈನ್‌ ವೇದಿಕೆಯಲ್ಲಿಯೂ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ’ ಎಂದು ಹೇಳಿದರು.

ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದ (ಎನ್‌ಜಿಎಂಎ) ಮಹಾನಿರ್ದೇಶಕ ಸಂಜೀವ್ ಕಿಶೋರ್ ಗೌತಮ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.