ADVERTISEMENT

ಅಮ್ನೆಸ್ಟಿ ಕಚೇರಿಗಳ ಮೇಲೆ ದಾಳಿ: ಸಿಎಚ್‌ಆರ್‌ಐ ಆತಂಕ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 19:56 IST
Last Updated 30 ಅಕ್ಟೋಬರ್ 2018, 19:56 IST

ಬೆಂಗಳೂರು: ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್‌’ಗೆ ಸೇರಿದ ಇಲ್ಲಿನ ಎರಡು ಕಚೇರಿಗಳ ಮೇಲೆ ಇತ್ತೀಚೆಗೆ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿದ ದಾಳಿ ಆತಂಕಕಾರಿ ವಿಷಯ ಎಂದು ಸಿಎಚ್ಆರ್‌ಐ (ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್‌) ಕಾರ್ಯನಿರ್ವಾಹಕ ಮಂಡಳಿ ಹೇಳಿದೆ.

ಈ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಿಎಚ್‌ಆರ್‌ಐ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು, ‘ನಾಗರಿಕ ಸಮಾಜದ ವಿವಿಧ ಸಮೂಹಗಳ ಮೇಲೆ ರಾಜಕೀಯ ಒತ್ತಡ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಹಕ್ಕುಗಳನ್ನು ಕೇಂದ್ರ ಸರ್ಕಾರ ಮತ್ತು ಅದರ ಪ್ರಾಧಿಕಾರಗಳು ರಕ್ಷಿಸಲು ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

‘ಮಾನವ ಹಕ್ಕು ರಕ್ಷಕರ ಧ್ವನಿಯನ್ನು ಹತ್ತಿಕ್ಕುವ ಇಂತಹ ದಾಳಿಗಳು, ಸರ್ಕಾರದ ಆಡಳಿತಕ್ಕೆ ಅನುಕೂಲಕರ ವಾತಾವರಣವನ್ನೇನೂ ಸೃಷ್ಟಿಸುವುದಿಲ್ಲ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ (ಎಫ್‌ಇಎಂಎ) ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಶೋಧಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.