ADVERTISEMENT

ದೇಶಭಾಷೆ, ದೇಶವಾಸಿಗಳನ್ನು ಬೆಳೆಸಿದ ಕ್ರೈಸ್ತರು: ಸಾಹಿತಿ ಬಂಜಗೆರೆ ಜಯಪ್ರಕಾಶ್‌

‘ಸಂಚಲನ’ ಪ್ರಶಸ್ತಿ ಪ್ರದಾನ, ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಬಂಜಗೆರೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 16:23 IST
Last Updated 13 ಏಪ್ರಿಲ್ 2024, 16:23 IST
ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಅವರಿಗೆ ‘ಸಂಚಲನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಚಲನದ ರೀಟಾ ರೀನಿ, ಲೇಖಕ ಎಫ್.ಎಂ ನಂದಗಾವ, ಲೇಖಕ ಎಚ್.ದಂಡಪ್ಪ, ಸಾಹಿತಿ ಬಂಜಗೆರೆ ಜಯಪ್ರಕಾಶ್ ಮತ್ತು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಮ್ ಭಾಗವಹಿಸಿದ್ದರು- ಪ್ರಜಾವಾಣಿ ಚಿತ್ರ
ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್ ರಾಜ್ ಅವರಿಗೆ ‘ಸಂಚಲನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಚಲನದ ರೀಟಾ ರೀನಿ, ಲೇಖಕ ಎಫ್.ಎಂ ನಂದಗಾವ, ಲೇಖಕ ಎಚ್.ದಂಡಪ್ಪ, ಸಾಹಿತಿ ಬಂಜಗೆರೆ ಜಯಪ್ರಕಾಶ್ ಮತ್ತು ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಮ್ ಭಾಗವಹಿಸಿದ್ದರು- ಪ್ರಜಾವಾಣಿ ಚಿತ್ರ   

ಬೆಂಗಳೂರು: ಲೌಕಿಕ ಶಿಕ್ಷಣದಿಂದ ವಂಚಿತವಾಗಿದ್ದ ಭಾರತಕ್ಕೆ ಕ್ರೈಸ್ತರು ಬಂದ ಬಳಿಕ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳನ್ನು ಸರ್ವರಿಗೆ ಸಿಗುವಂತೆ ಮಾಡಿದರು. ದೇಶಭಾಷೆ, ದೇಶವಾಸಿಗಳನ್ನೂ ಬೆಳೆಸಿದರು ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್‌ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ‘ಸಂಚಲನ’ ಪ್ರಶಸ್ತಿ ಪ್ರದಾನ ಹಾಗೂ ‘ಘಟ ಉರುಳಿತು’, ‘ಡಿಟೆಕ್ಟಿವ್‌ ಸ್ಟೋರೀಸ್‌’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಲ್ಲರಿಗೂ ಶಿಕ್ಷಣ ಎಂಬ ಕಲ್ಪನೆಯೇ ನಮ್ಮಲ್ಲಿ ಇರಲಿಲ್ಲ. ಗುರುಕುಲ ಶಿಕ್ಷಣ ಪದ್ಧತಿ ಇತ್ತಾದರೂ ಅದು ಜಾತಿ ಆಧಾರಿತವಾಗಿತ್ತು. ಮೌಢ್ಯಗಳಿಂದ ತುಂಬಿಹೋಗಿತ್ತು. ಚರಕ–ಸುಶ್ರುತ ವೈದ್ಯಕೀಯ ಪದ್ಧತಿ ಭಾರತದಲ್ಲಿ ಇದ್ದರೂ ಅದನ್ನು ಅನುಸರಿಸುತ್ತಿರಲಿಲ್ಲ. ಯಾಕೆಂದರೆ ಈ ಪದ್ಧತಿಯಲ್ಲಿ ಚಿಕಿತ್ಸೆ ನೀಡಬೇಕಿದ್ದರೂ ರೋಗಿಯನ್ನು ಮುಟ್ಟಿ, ದೇಹವನ್ನು ಪರೀಕ್ಷಿಸಬೇಕಿತ್ತು. ಮುಟ್ಟುವುದೇ ನಿಷಿದ್ಧವಾಗಿದ್ದು ಇದಕ್ಕೆ ಕಾರಣವಾಗಿತ್ತು. ಇಂಥ ಕಾಲದಲ್ಲಿ ಭಾರತಕ್ಕೆ ಬಂದ ಕ್ರೈಸ್ತರು ಎಲ್ಲರನ್ನು ನಾಗರಿಕರು ಎಂದು ಪರಿಗಣಿಸಿದರು’ ಎಂದು ವಿವರಿಸಿದರು.

ADVERTISEMENT

ಇಂಥದ್ದೇ ಆಶಯಗಳನ್ನು ಇಟ್ಟುಕೊಂಡು ‘ಸಂಚಲನ’ ಸಂಘಟನೆ ಮೂರು ದಶಕಗಳಿಂದ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಎಫ್‌.ಎಂ. ನಂದಗಾವ ಅವರ ‘ಘಟ ಉರುಳಿತು’ ಕಥಾ ಸಂಕಲನ ಬಗ್ಗೆ ಲೇಖಕ ಎಚ್‌. ದಂಡಪ್ಪ ಮಾತನಾಡಿ, ‘ಚರ್ಚ್‌ ಮತ್ತು ಧರ್ಮಗುರುಗಳ ಕೇಂದ್ರಿತವಾಗಿರುವ ಕಥೆಗಳೇ ಈ ಕೃತಿಯಲ್ಲಿ ಹೆಚ್ಚಿವೆ. ಪಾದ್ರಿಗಳ ಗುಣ ಮತ್ತು ಅವಗುಣಗಳನ್ನು ಲೇಖಕರು ತೆರೆದಿಟ್ಟಿದ್ದಾರೆ. ಕ್ರೈಸ್ತ ಪುರೋಹಿತ ವ್ಯವಸ್ಥೆಯ ಬಗ್ಗೆ ತಿಳಿಸುತ್ತಲೇ ಜಗತ್ತಿನ ವಿವಿಧ ಧರ್ಮಗಳ ಪುರೋಹಿತಶಾಹಿ ವ್ಯವಸ್ಥೆಯನ್ನೂ ವಿವರಿಸಿದ್ದಾರೆ. ಶಾಸ್ತ್ರಕ್ಕಿಂತ ಅನುಭವ ದೊಡ್ಡದು ಎಂಬುದನ್ನು ಸಾರಿದ್ದಾರೆ’ ಎಂದು ವಿಶ್ಲೇಷಿಸಿದರು.

ಗಿರೀಶ್‌ ತಾಳಿಕೋಟೆ ಅವರ ‘ಡಿಟೆಕ್ಟಿವ್‌ ಸ್ಟೋರೀಸ್‌’ ಬಗ್ಗೆ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಮಾತನಾಡಿ, ‘ಹೆಸರು ಡಿಟೆಕ್ಟಿವ್‌ ಎಂದಿದ್ದರೂ ಇದು ಜಗತ್ತಿನ ಅನ್‌ಡಿಟೆಕ್ಟಿವ್‌ (ಪತ್ತೆಯಾಗದ) ಸ್ಟೋರಿಗಳನ್ನು ಕಟ್ಟಿ ಕೊಡುತ್ತದೆ. ಮಗು ಕಳೆದುಕೊಂಡ ತಾಯಿಗೆ ಬೇರೆ ಮಗುವನ್ನು ತೋರಿಸಿ ‘ಇದೇ ನಿನ್ನ ಮಗು’ ಎಂದು ಪೊಲೀಸರು ನಂಬಿಸುವ ಪ್ರಯತ್ನ, ಒಪ್ಪದೇ ಇದ್ದಾಗ ಆಕೆಯನ್ನು ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸುವ ಪ್ರಕರಣವನ್ನು ಮನಕಲಕುವಂತೆ ವಿವರಿಸಿದ್ದಾರೆ. ವಿಮಾನ ಹೈಜಾಕ್‌ ಮಾಡಿಯೂ ಸಿಕ್ಕಿ ಬೀಳದವನ ಕಥೆ ಸಹಿತ ಜಗತ್ತಿನ 18 ರೋಚಕ ಪ್ರಕರಣಗಳು ಈ ಕೃತಿಯಲ್ಲಿವೆ’ ಎಂದು ವಿವರಿಸಿದರು.

ಅಖಿಲ ಕರ್ನಾಟಕ ಕಥೋಲಿಕ್ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷ ರಫಾಯಲ್‌ ರಾಜ್ ಅವರಿಗೆ ‘ಸಂಚಲನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೀಟಾ ರೀನಿ ಅವರು ಸಂಚಲನದ ಬಗ್ಗೆ ವಿವರಿಸಿದರು.

ಕೃತಿಗಳ ಪರಿಚಯ ಕೃತಿ:

ಘಟ ಉರುಳಿತು ಪ್ರಕಾರ: ಕಥಾ ಸಂಕಲನ ಲೇಖಕ: ಎಫ್‌.ಎಂ. ನಂದಗಾವ ಪುಟ: 164 ಬೆಲೆ: ₹ 180 ಕೃತಿ: ಡಿಟೆಕ್ಟಿವ್‌ ಸ್ಟೋರೀಸ್‌ ಪ್ರಕಾರ: ಪೊಲೀಸ್‌ ಕಥೆಗಳು ಲೇಖಕ: ಗಿರೀಶ್‌ ತಾಳಿಕಟ್ಟೆ ಪುಟ: 180 ಬೆಲೆ: ₹ 200 ಪ್ರಕಾಶನ: ಸಂಚಲನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.