ADVERTISEMENT

ಬೆಂಗಳೂರು: ನಗರದಲ್ಲಿ ಸಂಭ್ರಮದ ಕ್ರಿಸ್‌ಮಸ್‌ ಆಚರಣೆ

ಬಣ್ಣ ಬಣ್ಣದ ವಿದ್ಯುತ್ ದೀಪ, ಅಲಂಕಾರಿಕ ವಸ್ತು­ಗಳಿಂದ ಕಂಗೊಳಿಸಿದ ಚರ್ಚ್‌ಗಳು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 16:32 IST
Last Updated 25 ಡಿಸೆಂಬರ್ 2024, 16:32 IST
ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್‌ನಲ್ಲಿ ಕ್ರೈಸ್ತ ಧರ್ಮೀಯರು ಬುಧವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
–ಪ್ರಜಾವಾಣಿ ಚಿತ್ರಗಳು: ಬಿ.ಕೆ. ಜನಾರ್ದನ್
ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್‌ನಲ್ಲಿ ಕ್ರೈಸ್ತ ಧರ್ಮೀಯರು ಬುಧವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು –ಪ್ರಜಾವಾಣಿ ಚಿತ್ರಗಳು: ಬಿ.ಕೆ. ಜನಾರ್ದನ್   

ಬೆಂಗಳೂರು: ಬಣ್ಣ ಬಣ್ಣದ ವಿದ್ಯುತ್ ದೀಪ ಮತ್ತು ಅಲಂಕಾರಿಕ ವಸ್ತು­ಗಳಿಂದ ಸಿಂಗಾರಗೊಂಡಿದ್ದ ಚರ್ಚ್‌ಗಳು, ಅಲ್ಲಲ್ಲಿ ಸಾಂಟಾ ಕ್ಲಾಸ್‌ ವೇಷಧಾರಿಗಳು, ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ...

ಇದು ನಗರದಲ್ಲಿ ಬುಧವಾರ ಕಂಡು ಬಂದ ದೃಶ್ಯ. ಕ್ರಿಸ್‌ಮಸ್ ಅಂಗವಾಗಿ ನಗರದ ಹಲವೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಚರ್ಚ್‌ಗಳ ಆವರಣ ಮತ್ತು ಹೊರಗಿನ ರಸ್ತೆಗಳು ಕಳೆಗಟ್ಟಿದ್ದವು. ಚರ್ಚ್‌ಗಳ ಒಳಗೆ ಸಾಮೂಹಿಕ ಪ್ರಾರ್ಥನೆ ನಡೆದರೆ, ಸುತ್ತಮುತ್ತಲ ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್‌ಗಾಗಿ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ಖರೀದಿ ಭರಾಟೆಯಿಂದ ನಡೆದಿತ್ತು.

ಮಂಗಳವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಪ್ರಾರ್ಥನೆಗಳು ಆರಂಭವಾಗಿದ್ದವು. ಬುಧವಾರ ಮಧ್ಯಾಹ್ನದ ತನಕವೂ ಪ್ರಾರ್ಥನೆಗಳು ನಡೆದವು.

ADVERTISEMENT

ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್, ಫ್ರೇಜರ್‌ಟೌನ್‌ನಲ್ಲಿರುವ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್‌ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್‌ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ಸ್‌ ಚರ್ಚ್, ಲಿಂಗರಾಜಪುರದ ಹೋಲಿ ಗೋಸ್ಟ್ ಚರ್ಚ್, ಹಲಸೂರಿನ ಹೋಲಿ ಟ್ರಿನಿಟಿ ಚರ್ಚ್, ಎಂ.ಜಿ. ರಸ್ತೆಯ ಈಸ್ಟ್‌ ಪರೇಡ್ ಚರ್ಚ್, ರಿಚ್ಮಂಡ್‌ ರಸ್ತೆಯಲ್ಲಿರುವ ಸೇಕ್ರೆಡ್‌ ಹಾರ್ಟ್ ಚರ್ಚ್, ಸಂಪಂಗಿರಾಮನಗರದ ಹಡ್ಸನ್ ಸ್ಮಾರಕ ಚರ್ಚ್ ಸೇರಿದಂತೆ ನಗರದ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆದವು. ಕ್ರೈಸ್ತ ಧರ್ಮೀಯರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ಅಂಗವಾಗಿ ಚರ್ಚ್‌ಗಳು ವಿದ್ಯು­ತ್‌ ದೀಪ ಹಾಗೂ ಅಲಂಕಾರಿಕ ವಸ್ತು­ಗಳಿಂದ ಕಂಗೊಳಿಸಿದವು. ಸಾಂಟಾ ಕ್ಲಾಸ್ ವೇಷಧಾರಿಗಳು ಚರ್ಚ್‌ನ ಆವರಣದಲ್ಲಿದ್ದ ಭಕ್ತಾದಿ­ಗಳಿಗೆ ಬಗೆಬಗೆಯ ಉಡುಗೊರೆಗಳನ್ನು ನೀಡಿದರು. ಉಡುಗೊರೆ ಪಡೆಯಲು ಮಕ್ಕಳು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕ್ರಿಸ್‌ಮಸ್‌ ಕೇಕ್‌ ಹಾಗೂ ಸಿಹಿ ತಿನಿಸುಗಳನ್ನು ಹಂಚಲಾಯಿತು. 

ಯೇಸು ಹುಟ್ಟಿದ ಸಂದರ್ಭದ ಪ್ರತಿಕೃತಿಗಳು ಹಾಗೂ ಬಾಲ ಯೇಸುವನ್ನು ಮೇರಿ ಮಾತೆ ಎತ್ತಿಕೊಂಡಿರುವ ಮೂರ್ತಿಗಳನ್ನು ಚರ್ಚ್‌ ಆವರಣದಲ್ಲಿ ಇಡಲಾಗಿತ್ತು. ಕ್ರಿಸ್‌ಮಸ್‌ ಮರಕ್ಕೆ ಉಡುಗೊರೆಗಳನ್ನು ಕಟ್ಟಲಾಗಿತ್ತು. ಚರ್ಚ್‌ಗಳಲ್ಲಿ ಬೈಬಲ್‌ ಪಠಣದ ಜತೆಗೆ ಯೇಸುವಿನ ಮಹಿಮೆಯ ಗೀತೆಗಳನ್ನು ಹಾಡಲಾಯಿತು. ನೃತ್ಯರೂಪಕಗಳು, ಕೆಲವೆಡೆ ಮೇರಿ ಮಾತೆ, ಬಾಲ ಯೇಸುವಿನ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.

ಮನೆಗಳಲ್ಲಿ ವಿಶೇಷ ಅಲಂಕಾರ: ವಿಭಿನ್ನ ವಿನ್ಯಾಸದ ಗೋದಲಿಗಳು, ಸಾಂಟಾ ಕ್ಲಾಸ್‌ನ ಪ್ರತಿಬಿಂಬ, ಶುಭ ಸಂಕೇತದ ಗಂಟೆಗಳು, ಬಣ್ಣ ಬಣ್ಣದ ದೀಪಗಳಿಂದ ಕ್ರೈಸ್ತರ ಮನೆಗಳು ಅಲಂಕಾರಗೊಂಡಿದ್ದವು. ಕ್ರಿಸ್‌ಮಸ್‌ ಕಾರ್ಡ್‌ಗಳು ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಶುಭ ಕೋರಿದರು. ಅಶಕ್ತರಿಗೆ ಮತ್ತು ಬಡವರಿಗೆ ಬಟ್ಟೆ, ಉಡುಗೊರೆ, ಹಣ ನೀಡುವ ಮೂಲಕ ಕೆಲವರು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಕ್ರಿಸ್‌ಮಸ್‌ ಪ್ರಯುಕ್ತ ಮಾಲ್‌ಗಳಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಸಂಗೀತ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಶಾಲಾ–ಕಾಲೇಜುಗಳಿಗೆ ರಜೆಗಳಿದ್ದರಿಂದ ಮಾಲ್‌ಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್‌ನಲ್ಲಿ ಮೇಣದ ದೀಪಗಳನ್ನು ಹಚ್ಚುವ ಮೂಲಕ ಯೇಸುವಿಗೆ ನಮಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.