ADVERTISEMENT

ಕೊಡಗಿಗೆ ನೆರವು: ಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ಪಾದಯಾತ್ರೆ ಇಂದು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 9:25 IST
Last Updated 2 ಸೆಪ್ಟೆಂಬರ್ 2018, 9:25 IST

ಬೆಂಗಳೂರು: ಪ್ರವಾಹದಿಂದ ತೊಂದರೆಗೀಡಾದ ಕೊಡಗಿನ ಜನರಿಗೆ ನೆರವು ನೀಡಲು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಭಾನುವಾರ ‘ಕೊಡಗಿಗಾಗಿ ಕೊಡುಗೆ ಸಾಂತ್ವನ ಪಾದಯಾತ್ರೆ’ ನಡೆಯಲಿದೆ.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ವಿಜಯನಗರ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ, ಮಠದ ಆವರಣದಲ್ಲಿರುವ ಗಂಗಾಧರೇಶ್ವರಸ್ವಾಮಿ ದೇವಾಲಯದಿಂದ ಬೆಳಿಗ್ಗೆ 10 ಗಂಟೆಗೆ ಪಾದಯಾತ್ರೆ ಆರಂಭವಾಗಿದೆ. ಶನೇಶ್ಚರಸ್ವಾಮಿ ದೇಗುಲ, ದಾಸರಹಳ್ಳಿ ಜೈಮುನಿರಾವ್ ಸರ್ಕಲ್ ಮಾರ್ಗವಾಗಿ ಮಾರುತಿ ಮಂದಿರದವರೆಗೆ ಸಾಗಲಿದೆ ಎಂದು ವಿವರಿಸಿದರು.

ಪಾದಯಾತ್ರೆಯಲ್ಲಿ ಸರ್ವಧರ್ಮಗಳ ಗುರುಗಳು, ಸಾಧು ಸಂತರು, ಪಾದ್ರಿಗಳು, ಮೌಲ್ವಿಗಳು, ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಸಂಕಷ್ಟದಲ್ಲಿರುವವರಿಗೆ ತಕ್ಷಣವೇ ನೆರವು ನೀಡಲಾಗಿದೆ. ಆಗಸ್ಟ್‌ 25 ಮತ್ತು 26ರಂದು ಕೊಡಗು ಜಿಲ್ಲೆಯ ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಬಟ್ಟೆ, ಆಹಾರ ಸಾಮಗ್ರಿ, ಹೊದಿಕೆ, ನಿತ್ಯೋಪಯೋಗಿ ವಸ್ತು, ಹಣ್ಣು, ಔಷಧಿಗಳನ್ನು ವಿತರಿಸಲಾಗಿದೆ. ಆದಿಚುಂಚನಗಿರಿ ಆಸ್ಪತ್ರೆಯ ವೈದ್ಯರನ್ನು ಜೊತೆಯಲ್ಲಿ ಕರೆದೊಯ್ದು ಚಿಕಿತ್ಸೆಯನ್ನೂ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡಗಿನ ಜನರಿಗೆ ಶಾಶ್ವತ ಪರಿಹಾರ ಮತ್ತು ಆಶ್ರಯ ಕಲ್ಪಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಈ ಉದ್ದೇಶಕ್ಕೆ ಉದಾರ ದೇಣಿಗೆ ಸಂಗ್ರಹಿಸಲು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.