ADVERTISEMENT

ಬೆಂಗಳೂರು | ಚರ್ಚ್‌ ಸ್ಟ್ರೀಟ್: ಗುಂಡಿಗಳ ಆಗರ

‘ಪ್ರತಿಷ್ಠಿತ ರಸ್ತೆ’ಯೆಂಬ ಟ್ಯಾಗ್‌ಲೈನ್‌; ಕಲ್ಲು ಕಿತ್ತುಬಂದಿರುವುದು, ಒಣಗಿದ ಗಿಡಗಳ ‘ಆಕರ್ಷಣೆ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
<div class="paragraphs"><p>ಚರ್ಚ್ ಸ್ಟ್ರೀಟ್‌ನಲ್ಲಿ ಕಲ್ಲುಗಳು ಕಿತ್ತು ಹೋಗಿರುವುದು </p></div>

ಚರ್ಚ್ ಸ್ಟ್ರೀಟ್‌ನಲ್ಲಿ ಕಲ್ಲುಗಳು ಕಿತ್ತು ಹೋಗಿರುವುದು

   

-ಪ್ರಜಾವಾಣಿ ಚಿತ್ರ  / ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ಟೆಂಡರ್‌ ಶ್ಯೂರ್ ಯೋಜನೆಯಡಿ ₹18 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ನಗರದ ಪ್ರತಿಷ್ಠಿತ ಚರ್ಚ್‌ ಸ್ಟ್ರೀಟ್‌ ರಸ್ತೆಯಲ್ಲಿ ಕಲ್ಲುಗಳು ಕಿತ್ತುಬಂದು ಗುಂಡಿಗಳಾಗಿವೆ.

ADVERTISEMENT

ಹತ್ತಾರು ವರ್ಷ ಬಾಳಿಕೆ ಬರುತ್ತವೆ ಎಂಬ ಕಾರಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಟೆಂಡರ್‌ ಶ್ಯೂರ್ ರಸ್ತೆಗಳನ್ನು ಮಾಡಲಾಗಿದೆ. ವಿಶೇಷವಾಗಿ ಚರ್ಚ್‌ಸ್ಟ್ರೀಟ್‌ಗೆ ಇತರೆ ರಸ್ತೆಗಳಿಗಿಂತ ತುಸು ಹೆಚ್ಚೇ ವೆಚ್ಚ ಮಾಡಲಾಗಿದೆ. ಇಷ್ಟೆಲ್ಲ ಖರ್ಚು ಮಾಡಿರುವ 750 ಮೀಟರ್‌ ಉದ್ದದ ರಸ್ತೆಯಲ್ಲಿ ಹತ್ತಾರು ಕಡೆ ಕಲ್ಲುಗಳು ಕಿತ್ತುಬಂದಿವೆ. ಎರಡು ವರ್ಷಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತಲೇ ಇದೆ.

ಕಲ್ಲುಗಳು ಕಿತ್ತು ಬಂದಾಗಲೆಲ್ಲ, ಸಿಮೆಂಟ್‌ ಹಾಕಿ ದುರಸ್ತಿಪಡಿಸಲಾಗುತ್ತದೆ. ಇತ್ತೀಚೆಗೆ ಕಲ್ಲುಗಳು ಹೊರಬಂದು ರಸ್ತೆಯ ಕೆಲವೆಡೆ ಗುಂಡಿಗಳಾಗಿವೆ ಎಂದು ಸ್ಥಳೀಯ ವ್ಯಾಪಾರಿಗಳು ದೂರಿದರು.

ರಸ್ತೆಯ ಬದಿಯಲ್ಲಿ ಹಾಕಿರುವ ಅಲಂಕಾರಿಕ ಗಿಡಗಳು ಒಣಗಿವೆ. ಕೆಲವು ಕಡೆ ಗಿಡಗಳೇ ಇಲ್ಲ. ಇರುವ ಗಿಡಗಳಿಗೂ ನೀರು ಹಾಕುವವರಿಲ್ಲ. ಗಿಡಗಳಿದ್ದ ಜಾಗವೀಗ ತ್ಯಾಜ್ಯದ ತಾಣವಾಗುತ್ತಿದೆ. ಅದೇ ಸ್ಥಳಗಳಲ್ಲೇ ವಾಹನಗಳ ನಿಲುಗಡೆಯಾಗುತ್ತಿದೆ. ಕೋಟ್ಯಂತರ ವೆಚ್ಚ ಮಾಡಿ ಕಲ್ಪಿಸಿದ್ದ ಸೌಲಭ್ಯಗಳೂ ಹಾಳಾಗುತ್ತಿವೆ.

‘ಈಗಾಗಲೇ ಒಂದು ವರ್ಷದಿಂದ ರಸ್ತೆಯಲ್ಲಿದ್ದ ಸೌಲಭ್ಯಗಳು ಹಾಳಾಗುತ್ತಿವೆ. ಗಿಡಗಳು ಒಣಗಿವೆ. ಕಿತ್ತು ಹೊರಬಂದಿರುವ ಕಲ್ಲುಗಳನ್ನು ಸರಿಪಡಿಸಲು ಬಿಬಿಎಂಪಿ ಮುಂದಾಗುತ್ತಿಲ್ಲ. ರಸ್ತೆ ಹೀಗಿರುವುದರಿಂದ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ. ಬಿಬಿಎಂಪಿ ಸಹಾಯವಾಣಿಗೆ ದೂರು ನೀಡಿದ್ದರೂ ಎಂಜಿನಿಯರ್‌ಗಳು ಇತ್ತ ಸುಳಿಯುತ್ತಿಲ್ಲ’ ಎಂದು ವ್ಯಾಪಾರಿ ಮನೋಜ್‌ ಹೇಳಿದರು.

ಚರ್ಚ್ ಸ್ಟ್ರೀಟ್‌ನಲ್ಲಿ ಕಲ್ಲುಗಳು ಕಿತ್ತು ಹೋಗಿರುವುದು ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

‘ಕೋಟ್ಯಂತರ ವೆಚ್ಚ ಮಾಡಲೆಂದೆ ಹಲವು ರೀತಿಯ ಆಕರ್ಷಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅವುಗಳ ನಿರ್ವಹಣೆ ಬಗ್ಗೆ ಯೋಜನೆಯೇ ಇಲ್ಲ. ಇಷ್ಟೆಲ್ಲ ವೆಚ್ಚ ಮಾಡಿ ಅಭಿವೃದ್ಧಿಪಡಿಸಿರುವ ಈ ಚಿಕ್ಕ ರಸ್ತೆಯ ನಿರ್ವಹಣೆಯನ್ನು ಗುತ್ತಿಗೆ ನೀಡಬೇಕಾಗಿತ್ತು. ಪ್ರತಿಷ್ಠಿತ ರಸ್ತೆ, ಚರ್ಚ್‌ ಸ್ಟ್ರೀಟ್‌ನಂತಹ ರಸ್ತೆಯೇ ಇಲ್ಲ ಎಂದು ಹೊರ ದೇಶದ ಗಣ್ಯರನ್ನು ಇಲ್ಲಿಗೆ ಕರೆತರುತ್ತಾರೆ. ಅವರು ಬಂದಾಗ ಕೆಂಪುಹಾಸು ಹಾಕಿ, ರಸ್ತೆಯಲ್ಲಿರುವ ಹುಳುಕನ್ನು ಮುಚ್ಚುತ್ತಾರೆ. ಇದು ಬಿಬಿಎಂಪಿಯ ‘ಪ್ರತಿಷ್ಠಿತ ಕೆಲಸ’ ಎಂದು ವ್ಯಾಪಾರಿ ರಾಮ್‌ಮೋಹನ್‌ ದೂರಿದರು.

ಚರ್ಚ್ ಸ್ಟ್ರೀಟ್‌ನಲ್ಲಿ ನಡೆಲಾಗಿದ್ದ ಆಲಂಕಾರಿಕ ಗಿಡಗಳ ಒಣಗಿದ್ದು ಆ ಜಾಗ ತ್ಯಾಜ್ಯದ ತಾಣವಾಗಿದೆ ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಸಿಎಸ್‌ಆರ್‌ ನಿಧಿಯಲ್ಲಿ ಟೆಂಡರ್‌ ಶ್ಯೂರ್‌ ರಸ್ತೆ ನಿರ್ವಹಣೆ: ಪ್ರಹ್ಲಾದ್‌
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗಿರುವ ರಸ್ತೆಗಳನ್ನು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಲ್ಲಿ ನಿರ್ವಹಣೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಈ ರಸ್ತೆಗಳ ನಿರ್ವಹಣೆಗೆ ಬಿಬಿಎಂಪಿ ಒಂದು ರೂಪಾಯಿಯೂ ವೆಚ್ಚ ಮಾಡುವುದಿಲ್ಲ. ಜ.1ರಿಂದ ಈ ಯೋಜನೆ ಜಾರಿಗೆ ಬರುತ್ತದೆ’ ಎಂದು ಪ್ರಧಾನ ಎಂಜಿನಿಯರ್‌ ಬಿ.ಎಸ್‌. ಪ್ರಹ್ಲಾದ್‌ ತಿಳಿಸಿದರು. ‘ಚರ್ಚ್‌ ಸ್ಟ್ರೀಟ್‌ನಲ್ಲಿ ಕಾಂಕ್ರೀಟ್‌ ಲಾರಿಗಳು 10 ಸಾವಿರ ಲೀಟರ್‌ ಸಾಮರ್ಥ್ಯದ ನೀರಿನ ಟ್ಯಾಂಕರ್‌ಗಳು ಹೆಚ್ಚು ಚಲಿಸುತ್ತಿರುವುದರಿಂದ ಗ್ರಾನೈಟ್‌ ಕಲ್ಲುಗಳ ಮೇಲೆ ಹೆಚ್ಚಿನ ಹೊರೆ ಬಿದ್ದು ಹೊರಬರುತ್ತಿವೆ. ಭಾರಿ ವಾಹನಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆ ಬದಿಯ ಗಿಡಗಳ ನಿರ್ವಹಣೆಯನ್ನೂ ಮಾಡಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.