ADVERTISEMENT

ಸಿಐಡಿ ಸೈಬರ್ ಬಲೆಗೆ ‘ಲಕ್ಕಿ–ಡ್ರಾ’ ವಂಚಕ !

ಅಂಚೆ ಇಲಾಖೆ ಹೆಸರು ದುರ್ಬಳಕೆ * ಮೊಬೈಲ್ ಆಮಿಷ ಒಡ್ಡಿ ಪೂಜಾ ಸಾಮಗ್ರಿ ಕಳುಹಿಸುತ್ತಿದ್ದ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 19:18 IST
Last Updated 29 ಮಾರ್ಚ್ 2019, 19:18 IST
ಸುಹೇಲ್
ಸುಹೇಲ್   

ಬೆಂಗಳೂರು: ‘ಲಕ್ಕಿ–ಡ್ರಾದಲ್ಲಿ ಮೊಬೈಲ್ ಗೆದ್ದೀದ್ದೀರಾ..’ ಎಂದು ಸಾರ್ವಜನಿಕರಿಗೆ ನಂಬಿಸಿ ಪಾರ್ಸೆಲ್‌ನಲ್ಲಿ ಪೂಜಾ ಸಾಮಾಗ್ರಿಗಳನ್ನು ಕಳುಹಿಸುತ್ತಿದ್ದ ಸುಹೇಲ್ ಖಾನ್ (60) ಎಂಬಾತ ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಕೆಲವರು ಜನರನ್ನು ವಂಚಿಸಲು ಅಂಚೆ ಇಲಾಖೆಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್‌ ಜನರಲ್‌ ಚಾರ್ಲ್ಸ್‌ ಲೋಬೋ ಮಾರ್ಚ್ 21ರಂದು ದೂರು ಕೊಟ್ಟಿದ್ದರು. ಪೊಲೀಸರು ಆ ‍ಪ್ರಕರಣದ ಬೆನ್ನು ಹತ್ತಿದಾಗ ಸುಹೇಲ್ ಖಾನ್‌ನ ಕೃತ್ಯ ಬಯಲಾಗಿದೆ.

ಮೊದಲು ಕೇಬಲ್ ಆಪರೇಟರ್ ಆಗಿದ್ದ ಸುಹೇಲ್, ಮೂರು ವರ್ಷಗಳಿಂದ ‘ಲಕ್ಕಿ–ಡ್ರಾ ದಂಧೆ’ ಪ್ರಾರಂಭಿಸಿದ್ದ. ಬುಧವಾರ ಆತನ ಕಚೇರಿ ಹಾಗೂ ಪಾರ್ಸೆಲ್‌ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನ ಮೇಲೆ ದಾಳಿ ನಡೆಸಿ, ₹ 28 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಹೇಗೆ ವಂಚನೆ: ‘ಕಾಲ್‌ಸೆಂಟರ್ ಮಾದರಿಯಲ್ಲಿ 25ಕ್ಕೂ ಹೆಚ್ಚು ಮಂದಿಯನ್ನು ಟೆಲಿಕಾಲರ್‌ಗಳನ್ನಾಗಿ ನೇಮಿಸಿಕೊಂಡಿದ್ದ ಸುಹೇಲ್, ವಿವಿಧ ಮೂಲಗಳಿಂದ ಸಾರ್ವಜನಿಕರ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸುತ್ತಿದ್ದ.

ನಂತರ ‘ಆರ್‌.ಕೆ.ಮಾರ್ಕೆಟಿಂಗ್’, ‘ಎಸ್‌.ಕೆ.ವರ್ಲ್ಡ್‌’, ‘ಎ–1 ಮಾರ್ಕೆಟಿಂಗ್’ ಕಂಪನಿಗಳ ಹೆಸರಿನಲ್ಲಿ ಜನರಿಗೆ ಕರೆ ಮಾಡುತ್ತಿದ್ದ ನೌಕರರು, ‘ನೀವು ಲಕ್ಕಿ–ಡ್ರಾ ಸ್ಪರ್ಧೆಯಲ್ಲಿ ದುಬಾರಿ ಮೌಲ್ಯದ ಮೊಬೈಲ್ ಗೆದ್ದಿದ್ದೀರಿ. ಅಂಚೆ ವಿಳಾಸ ನೀಡಿದರೆ ಪಾರ್ಸೆಲ್‌ ಕಳುಹಿಸುತ್ತೇವೆ. ನೀವು ಅಂಚೆ ವೆಚ್ಚವನ್ನು ಮಾತ್ರ ಪಾವತಿಸಿ ಪಾರ್ಸೆಲ್ ಪಡೆದುಕೊಳ್ಳಬಹುದು’ ಎಂದು ನಂಬಿಸುತ್ತಿದ್ದರು.

ಕೊನೆಗೆ, ಮೊಬೈಲ್‌ನ ಬದಲಾಗಿ ಪೂಜಾ ಸಾಮಗ್ರಿ ಹಾಗೂ ದಿನಬಳಕೆಯ ‍ಪ್ಲಾಸ್ಟಿಕ್ ವಸ್ತುಗಳನ್ನು ವ್ಯವಸ್ಥಿತವಾಗಿ ಪ್ಯಾಕ್ ಮಾಡಿ ವಿಪಿಪಿ (ವ್ಯಾಲ್ಯೂ ಪೇಯೆಬಲ್ ಪೋಸ್ಟ್) ಅಂಚೆ ಮೂಲಕ ಕಳುಹಿಸುತ್ತಿದ್ದರು. ಗ್ರಾಹಕರು ಅಂಚೆ ಸಿಬ್ಬಂದಿಗೆ ಹಣ ಕೊಟ್ಟು ಆ ಪಾರ್ಸೆಲ್‌ಗಳನ್ನು ಪಡೆದುಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ದಿನಕ್ಕೆ 200 ಪಾರ್ಸಲ್: ಆರೋಪಿ ₹ 1,400 ಹಾಗೂ ₹ 2,300 ವಿಪಿ‍ಪಿ ಅಂಚೆ ವೆಚ್ಚದ ಎರಡು ಬಗೆಯ ಪಾರ್ಸೆಲ್‌ಗಳನ್ನು ನಿತ್ಯ ಸುಮಾರು 200 ಮಂದಿಗೆ ಕಳುಹಿಸುತ್ತಿದ್ದ. ಬಳಿಕ ಕಾಡುಗೊಂಡನಹಳ್ಳಿಯ ಅರೇಬಿಕ್ ಕಾಲೇಜು ಸಮೀಪ ಇರುವ ಅಂಚೆ ಕಚೇರಿಗೆ ಹೋಗಿ, ಸ್ವೀಕೃತಿಗೊಂಡ ಪಾರ್ಸೆಲ್‌ಗಳ ಹಣ ಪಡೆದುಕೊಳ್ಳುತ್ತಿದ್ದ. ಬುಧವಾರ ಅದೇ ಅಂಚೆ ಕಚೇರಿ ಬಳಿ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆ ಹಿಡಿಯಲಾಯಿತು ಎಂದು ಸೈಬರ್ ಕ್ರೈಂ ಪೊಲೀಸರು ಮಾಹಿತಿ ನೀಡಿದರು.

‘ಕಡಿಮೆ ಮೊತ್ತವೆಂದು ದೂರು ಕೊಡುತ್ತಿಲ್ಲ’

ಕಾಡುಗೊಂಡನಹಳ್ಳಿ ಸಮೀಪದ ವೆಂಕಟೇಶ್ವರಪುರಂ ನಿವಾಸಿಯಾದ ಸುಹೇಲ್, ಸುಲಭವಾಗಿ ಹಣ ಸಂಪಾದಿಸುವ ಸಲುವಾಗಿ ಈ ದಂಧೆಗೆ ಇಳಿದಿದ್ದ. ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದ ಜನರಿಗೂ ಈತ ವಂಚಿಸಿದ್ದಾನೆ. ಕಡಿಮೆ ಮೊತ್ತವೆಂಬ ಕಾರಣಕ್ಕೆ ಯಾರೂ ದೂರು ಕೊಟ್ಟಿಲ್ಲ. ಸುಹೇಲ್‌ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.