ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಮಾಲೂರು ಕೈಗಾರಿಕಾ ಪ್ರದೇಶದ ವರ್ಗಾ ಅಟ್ಯಾಚ್‌ಮೆಂಟ್ ಸಂಸ್ಥೆ ತನಕ ಹೊರಟಿದ್ದ ಪಾದಯಾತ್ರೆಯನ್ನು ಹೊಸಕೋಟೆ ಟೋಲ್ ಬಳಿ ಪೊಲೀಸರು ತಡೆದು ಹೋರಾಟಗಾರರನ್ನು ಬಂಧಿಸಿರುವ ಕ್ರಮವನ್ನು ಸಿಐಟಿಯು ರಾಜ್ಯ ಸಮಿತಿ ಖಂಡಿಸಿದೆ.
ಕಾರ್ಮಿಕರಿಗೆ ನ್ಯಾಯಬದ್ಧ ರೀತಿಯಲ್ಲಿ ನೀಡಬೇಕಾದ ಸೌಲಭ್ಯಗಳನ್ನೂ ನೀಡಿಲ್ಲ. ಕೈಗಾರಿಕೆಯನ್ನು ಮುಚ್ಚಿರುವುದಾಗಿ ಸುಳ್ಳು ಹೇಳಿ, 81 ಕಾರ್ಮಿಕರಿಗೆ ಕೆಲಸದಿಂದ ಹೊರಹಾಕಿದ್ದಾರೆ. ಮತ್ತೊಂದು ಸಂಸ್ಥೆಯ ಮೂಲಕ ಉತ್ಪಾದನಾ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಸಿಐಟಿಯು ಅಧ್ಯಕ್ಷೆ ಎಂ.ಎಸ್.ಮೀನಾಕ್ಷಿ ಸುಂದರಂ ಹಾಗೂ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ಆರೋಪಿಸಿದ್ದಾರೆ.
ಶಾಂತಿಯುತವಾಗಿ ಪಾದಯಾತ್ರೆ ಹೊರಟಿತ್ತು. ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಲಾಗಿದೆ. ಸರ್ಕಾರವು ಮಾಲೀಕರ ಪರ ನಿಲ್ಲುತ್ತಿರುವುದನ್ನು ಸ್ಪಷ್ಟವಾಗಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 142 ದಿನಗಳಿಂದ ಶಾಂತ ರೀತಿಯಲ್ಲಿ ಹಾಗೂ ಸಾಂವಿಧಾನಿಕ ಹಕ್ಕುಗಳ ಆಧಾರದಲ್ಲಿ ಹಲವು ರೀತಿಯ ಕಾನೂನುಬದ್ದ ಹೋರಾಟವನ್ನು ಮಾಡಿ, ಕಾರ್ಮಿಕ ಸಚಿವ, ಕೋಲಾರ ಜಿಲ್ಲಾಧಿಕಾರಿ ಮತ್ತು ಕಾರ್ಮಿಕ ಇಲಾಖೆಯ ಪ್ರಮುಖರಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಕಾರ್ಮಿಕರ ಬೇಡಿಕೆ ಈಡೇರಿಲ್ಲ. ರಾಜ್ಯದಲ್ಲಿ ಜಾರಿಯಲ್ಲಿರುವ ಹಲವು ಕಾನೂನುಗಳನ್ನು ವರ್ಗಾ ಅಟ್ಯಾಚ್‌ಮೆಂಟ್ ಮಾಲೀಕರು ನಿರಂತರವಾಗಿ ಉಲ್ಲಂಘನೆ ಮಾಡಿ, ಕಾರ್ಮಿಕರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.