ADVERTISEMENT

ಸ್ಮಾರ್ಟ್‌ ಆಗದ ಸಿಟಿ: ಪ್ರಯಾಣ ಹೈರಾಣ

ಬೆಂಗಳೂರು ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ದೂಳಿನ ಅಬ್ಬರ; ವಾಹನ ಸಂಚಾರ ದುಸ್ತರ

ವಿಜಯಕುಮಾರ್ ಎಸ್.ಕೆ.
Published 3 ಅಕ್ಟೋಬರ್ 2020, 18:33 IST
Last Updated 3 ಅಕ್ಟೋಬರ್ 2020, 18:33 IST
ಬಸವೇಶ್ವರ ವೃತ್ತದ ಬಳಿ ಸ್ಮಾರ್ಟ್‌ಸಿಟಿ ಕಾಮಗಾರಿ(ಎಡಚಿತ್ರ), ರಾಜಭವನ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ–ಪ್ರಜಾವಾಣಿ ಚಿತ್ರಗಳು/ಎಂ.ಎಸ್. ಮಂಜುನಾಥ್
ಬಸವೇಶ್ವರ ವೃತ್ತದ ಬಳಿ ಸ್ಮಾರ್ಟ್‌ಸಿಟಿ ಕಾಮಗಾರಿ(ಎಡಚಿತ್ರ), ರಾಜಭವನ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ–ಪ್ರಜಾವಾಣಿ ಚಿತ್ರಗಳು/ಎಂ.ಎಸ್. ಮಂಜುನಾಥ್   

ಬೆಂಗಳೂರು: ‘ಅಡಚಣೆಗಾಗಿ ಕ್ಷಮಿಸಿ, ಬೆಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ’. ಈ ಫಲಕಗಳು ನಗರದ ಕೇಂದ್ರ ವಾಣಿಜ್ಯ ಪ್ರದೇಶಗಳಲ್ಲಿ (ಸಿಬಿಡಿ) ರಾರಾಜಿಸುತ್ತಿವೆ.

ಈ ಪ್ರದೇಶಕ್ಕೆ ಹೋಗುವ ಆಲೋಚನೆ ಇದ್ದವರು ಸ್ಪಲ್ಪ ಎಚ್ಚರ ವಹಿಸಿ. ಸ್ಮಾರ್ಟ್‌ಸಿಟಿ ಯೋಜನೆಗಾಗಿ ಇಲ್ಲಿನ ಬಹುತೇಕ ರಸ್ತೆಗಳನ್ನು ಅಗೆಯಲಾಗಿದೆ. ದೂಳಿನೊಂದಿಗೆ ತುಂಬಿದ, ಇಲ್ಲಿನ ಕಿರಿದಾದ ರಸ್ತೆಯಲ್ಲಿ ವಾಹನ ಚಾಲನೆ ಮಾಡುವುದು ಅನಿವಾರ್ಯ.

ರಾಜಭವನ ರಸ್ತೆಯ ಒಂದು ಭಾಗದಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ರಸ್ತೆಯನ್ನು ಅಗೆಯಲಾಗಿದ್ದು, ಸೈಕಲ್ ಪಥ ಒಳಗೊಂಡ ವಿಶಾಲವಾದ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ. ಹೀಗಾಗಿ ರಸ್ತೆ ಕಿರಿದಾಗಿದ್ದು, ಮೊದಲೇ ವಾಹನ ದಟ್ಟಣೆ ಹೆಚ್ಚಿರುವ ಈ ರಸ್ತೆಯಲ್ಲಿ ಸಂಚಾರ ಮತ್ತಷ್ಟು ಕಠಿಣವಾಗಿದೆ. ಶಿವಾಜಿನಗರ, ಸೆಂಟ್ರಲ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಇನ್‌ಫೆಂಟ್ರಿ ರಸ್ತೆ, ಕ್ವೀನ್ಸ್ ರಸ್ತೆಗಳಲ್ಲೂ ಇದೇ ಸ್ಥಿತಿ ಇದೆ.

ADVERTISEMENT

2017ರ ಜೂನ್‌ನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಗೆ ಬೆಂಗಳೂರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿತು. 2018ರ ಜನವರಿಯಲ್ಲಿ ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಅಸ್ತಿತ್ವಕ್ಕೆ ಬಂತು. ಇದರ ಅಡಿಯಲ್ಲಿ ಆರಂಭವಾಗಿರುವ ಕಾಮಗಾರಿಗಳಲ್ಲಿ ಒಂದೇ ಒಂದು ಕಡೆಯೂ ಮುಕ್ತಾಯದ ಹಂತಕ್ಕೆ ತಲುಪಿಲ್ಲ.

ಅಗೆದು ಹಾಕಿದ ಮಣ್ಣಿನ ರಾಶಿ ತಿಂಗಳುಗಟ್ಟಲೆ ಹಾಗೆಯೇ ಬಿದ್ದಿವೆ. ಒಳಚರಂಡಿ ಮತ್ತು ಕುಡಿಯುವ ನೀರಿನ ಸಂಪರ್ಕದ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ಜಲಮಂಡಳಿ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ. ಅದು ಆಮೆಗತಿಯಲ್ಲಿ ನಡೆಯುತ್ತಿದ್ದು, ಜನರ ಸಂಚಾರಕ್ಕೆ ತೊಡಕಾಗಿದೆ.

‘ಲಾಕ್‌ಡೌನ್‌ಗೂ ಮುಂಚೆಯೇ ರಸ್ತೆ ಅಗೆದು ಹೋದವರು ಕೆಲ ರಸ್ತೆಗಳಲ್ಲಿ ಈಗ ಕಾಮಗಾರಿ ಮುಂದುವರಿಸಲಾಗುತ್ತಿದೆ. ಅದೂ ಕೆಲವೇ ಕೆಲವು ಜನ ಕೆಲಸ ಮಾಡುತ್ತಿದ್ದು, ಸದ್ಯಕ್ಕೆ ಕಾಮಗಾರಿ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ.

‘ಲಾಕ್‌ಡೌನ್ ಮತ್ತು ಸಾಂಕ್ರಮಿಕ ರೋಗಗಳು ಹರಡುವ ಭಯದಿಂದ ಮೊದಲೇ ವ್ಯಾಪಾರ ವಹಿವಾಟು ಕುಸಿತಗೊಂಡಿದೆ. ಇದರ ನಡುವೆ ಅಗೆದು ಬಿಟ್ಟಿರುವ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಿಕೊಂಡು ಬರಲು ಹೆದರಿ ಗ್ರಾಹಕರೇ ಇಲ್ಲವಾಗಿದ್ದಾರೆ. ಒಂದೆಡೆ ಕೊರೊನಾ ನಮ್ಮ ಬದುಕು ಕಿತ್ತುಕೊಂಡಿದ್ದರೆ, ಇನ್ನೊಂದೆಡೆ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿ ನಮ್ಮ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ’ ಎಂದು ಸೆಂಟ್ರಲ್ ಸ್ಟ್ರೀಟ್‌ನಲ್ಲಿ ಫರ್ನಿಚರ್ ಅಂಗಡಿ ನಡೆಸುವ ಸೈಯದ್ ಬೇಸರ ವ್ಯಕ್ತಪಡಿಸಿದರು.

ಡಿಸೆಂಬರ್‌ ವೇಳೆಗೆ ಮುಕ್ತಾಯ

‘ಸದ್ಯ ಅಗೆದಿರುವ ರಸ್ತೆಗಳ ಕಾಮಗಾರಿ ಡಿಸೆಂಬರ್ ವೇಳೆಗೆ ಮುಕ್ತಾಯ ಆಗಲಿದೆ’ ಎಂದು ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.

‘ಕಾಮಗಾರಿಗಳಿಗೆ 2019ರ ಫೆಬ್ರುವರಿಯಲ್ಲಿ ಕಾರ್ಯಾದೇಶ ಹೊರಡಿಸಲಾಗಿದೆ. ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡು ಕೆಲಸ ಆರಂಭಿಸಿದ ಕೆಲವೇ ತಿಂಗಳಲ್ಲಿ ಕೋವಿಡ್ ಶುರುವಾಯಿತು. ಕಾರ್ಮಿಕರು ಊರುಗಳಿಗೆ ಮರಳಿದ್ದರಿಂದ ತೊಂದರೆ ಆಯಿತು’ ಎಂದು ತಿಳಿಸಿದರು.

‘ಊರಿಗೆ ಮರಳಿದ್ದ ಎಲ್ಲಾ ಕಾರ್ಮಿಕರೂ ವಾಪಸ್ ಬಂದಿಲ್ಲ. ಇರುವ ಕಾರ್ಮಿಕರಿಂದಲೇ ವೇಗವಾಗಿ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆಗಳನ್ನು ಅಗೆದಿರುವುದರಿಂದ ಜನರಿಗೆ ಆಗಿರುವ ತೊಂದರೆ ತಪ್ಪಿಸಲು ಹಗಲು–ರಾತ್ರಿ ಕೆಲಸ ಮುಂದುವರಿಸಲು ಶ್ರಮಿಸುತ್ತಿದ್ದೇವೆ‍‍. ಜನರೂ ಸಹಕಾರ ನೀಡಬೇಕು’ ಎಂದರು.

ಅಂಕಿ–ಅಂಶ

* ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳ ಸಂಖ್ಯೆ; 36

* ಪ್ರಗತಿಯಲ್ಲಿರುವ ಯೋಜನೆಗಳ ಒಟ್ಟು ಮೊತ್ತ; ₹ 481.65 ಕೋಟಿ

* ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿರುವುದು; 2019 ಫೆಬ್ರುವರಿಯಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.