ಬೆಂಗಳೂರು: ಸಿವಿಲ್ ಸ್ವರೂಪದ ವ್ಯಾಜ್ಯಗಳು ಠಾಣೆಗೆ ಬಂದಾಗ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಬಿಡುಗಡೆ ಮಾಡಿದ್ದಾರೆ.
ಮಾರ್ಗಸೂಚಿ ಅನುಸಾರವೇ ಸಿವಿಲ್ ಸ್ವರೂಪದ ವಿವಾದಗಳನ್ನು ಪೊಲೀಸ್ ಅಧಿಕಾರಿಗಳು ನಿರ್ವಹಿಸಬೇಕು ಎಂದೂ ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ರಾಜ್ಯದ ಎಲ್ಲ ಠಾಣಾಧಿಕಾರಿಗಳಿಗೆ ಈ ಸುತ್ತೋಲೆ ರವಾನೆ ಮಾಡಲಾಗಿದೆ.
‘ಯಾವುದೇ ಪೊಲೀಸ್ ಅಧಿಕಾರಿ, ತಾನು ಸ್ವೀಕರಿಸಿದ ದೂರು ಅಥವಾ ಮಾಹಿತಿ ಸಂಪೂರ್ಣವಾಗಿ ಸಿವಿಲ್ ಸ್ವರೂಪದ ವ್ಯಾಜ್ಯವೆಂದು ತಿಳಿದಿದ್ದರೂ ಸದರಿ ವ್ಯಾಜ್ಯವು ಒಂದು ಪಕ್ಷ ಅಥವಾ ವ್ಯಕ್ತಿಗೆ ಸಹಾಯ ಮಾಡಬೇಕೆನ್ನುವ ದುರುದ್ದೇಶದಿಂದ ಕಾನೂನು ಬಾಹಿರವಾಗಿ ಸ್ವತ್ತುಗಳನ್ನು ಪಡೆಯಲು, ಸ್ವಾಧೀನ ಪಡಿಸಿಕೊಳ್ಳಲು ನೆರವು ನೀಡಿದರೆ ಅಪರಾಧಿಕ ದುರ್ನಡತೆ ಎಂದೇ ಪರಿಗಣಿಸಲಾಗುವುದು. ಅಂತಹ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ, ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರು ಸುತ್ತೋಲೆಯಲ್ಲಿ ಎಚ್ಚರಿಸಿದ್ದಾರೆ.
ದೂರುದಾರರು ಸಿವಿಲ್ ವ್ಯಾಜ್ಯವಿರುವ ಮಾಹಿತಿಯುಳ್ಳ ದೂರನ್ನು ಠಾಣಾಧಿಕಾರಿಗೆ ಸಲ್ಲಿಸಿದಾಗ ಅಂತಹ ದೂರು ಅಥವಾ ಮಾಹಿತಿಯನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಬೇಕು. ಮೇಲ್ನೋಟಕ್ಕೆ ಸಿವಿಲ್ ವ್ಯಾಜ್ಯವೆಂದು ಕಂಡುಬಂದರೆ ಆ ವಿಷಯವನ್ನು ಸ್ಪಷ್ಟವಾಗಿ ‘ಠಾಣಾ ದಿನಚರಿ’ಯಲ್ಲಿ ಉಲ್ಲೇಖಿಸಬೇಕು. ಪರಿಹಾರಕ್ಕಾಗಿ ಸಕ್ಷಮ ಸಿವಿಲ್ ನ್ಯಾಯಾಲಯಕ್ಕೆ ದಾವೆ ದಾಖಲಿಸುವುದು ಸೂಕ್ತವೆಂದು ದೂರುದಾರ ಅಥವಾ ಅವರ ಪ್ರತಿನಿಧಿಗೆ ಹಿಂಬರಹ ನೀಡಿ ಕಳುಹಿಸಬೇಕು ಎಂದೂ ಸುತ್ತೋಲೆಯಲ್ಲಿ ವಿವರಿಸಲಾಗಿದೆ.
‘ಸ್ವೀಕರಿಸಿದ ಮಾಹಿತಿ ಅಥವಾ ದೂರಿನಲ್ಲಿ ಅಪರಾಧಿಕ ಅಂಶಗಳು ಕಂಡುಬಂದು, ಸಂಜ್ಞೇಯ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರದೇ ಇದ್ದಾಗ ಠಾಣಾಧಿಕಾರಿಯು ಸಂಜ್ಞೇಯ ಅಪರಾಧಿಕ ಅಂಶಗಳು ಕಂಡುಕೊಳ್ಳುವ ಕುರಿತಂತೆ ಪ್ರಾಥಮಿಕ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ‘ಲಲಿತಾ ಕುಮಾರಿ ಹಾಗೂ ಇತರರ ವಿರುದ್ಧದ ಉತ್ತರಪ್ರದೇಶ ರಾಜ್ಯ ಸರ್ಕಾರದ ಪ್ರಕರಣ’ದಲ್ಲಿ ನೀಡಿದ್ದ ನಿರ್ದೇಶನದಂತೆ ಕ್ರಮ ಕೈಗೊಳ್ಳಬಹುದು’ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.
‘ಠಾಣಾಧಿಕಾರಿಯು ಪ್ರಾಥಮಿಕ ವಿಚಾರಣೆಯನ್ನು ನಾಲ್ಕು ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು. ಆ ಮೂಲಕ ಸಂಜ್ಞೇಯ ಅಪರಾಧಿಕ ದೂರಿನಲ್ಲಿ ಸಂಜ್ಞೇಯ ಅಪರಾಧಿಕ ಅಂಶಗಳು ಕಂಡುಬಂದರೆ ಅಥವಾ ಕಂಡುಬಾರದೇ ಇರುವ ಬಗ್ಗೆ ಅಥವಾ ಪ್ರಕರಣವು ತನಿಖೆಗೆ ಅರ್ಹ ಅಥವಾ ಅರ್ಹವಲ್ಲ ಎಂಬುದನ್ನು ಪತ್ತೆ ಮಾಡಿ ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದೂ ವಿವರಿಸಲಾಗಿದೆ.
ಇದೇ ಸುತ್ತೋಲೆಯಲ್ಲಿ ಸಿವಿಲ್ ಸ್ವರೂಪದ ವಿವಾದಗಳು ಮತ್ತು ಪ್ರಕರಣಗಳಲ್ಲಿ ಪೊಲೀಸ್ ರಕ್ಷಣೆ ನೀಡುವುದರ ಕುರಿತು, ಸಿವಿಲ್ ಸ್ವರೂಪದ ವ್ಯಾಜ್ಯಗಳಲ್ಲಿ ಪೊಲೀಸ್ ಅಧಿಕಾರಿ ಯಾವಾಗ ಮಧ್ಯ ಪ್ರವೇಶಿಸಬಹುದು ಎಂಬುದರ ಕುರಿತು ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.