ADVERTISEMENT

ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ಅಗತ್ಯ: ಪುರುಷೋತ್ತಮ ಬಿಳಿಮಲೆ

ನಗರ ವಿ.ವಿಯಲ್ಲಿ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರ ‘ಮಾರ್ಗ’ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 14:00 IST
Last Updated 8 ಜನವರಿ 2026, 14:00 IST
ಡಾ. ಮನಮೋಹನಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯ ಆಯೋಜಿಸಿದ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ.
ಡಾ. ಮನಮೋಹನಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯ ಆಯೋಜಿಸಿದ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರದ ಉದ್ಘಾಟನೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ.   

ಬೆಂಗಳೂರು: ಗ್ರಾಮೀಣ ಮತ್ತು ಬಡ ಕುಟುಂಬಗಳ ವಿದ್ಯಾರ್ಥಿಗಳ ನೆರವಿಗಾಗಿ ಡಾ.ಮನಮೋಹನ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ‘ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರ- ಮಾರ್ಗ’ ಆರಂಭಿಸಿದ್ದು, ಉಚಿತ ತರಬೇತಿ ನೀಡಲಿದೆ.

ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಗುರುವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಕೇಂದ್ರವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಪುರುಷೋತ್ತಮ ಬಿಳಿಮಲೆ, ‘ಹಳೆಯ ಮಾದರಿಯ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳಿಂದ ಜೀವನ ಮಾರ್ಗ ರೂಪಿಸಿಕೊಳ್ಳಲು ಸಾಧ್ಯವಾಗದಿರುವ ಕಾರಣ ಕೌಶಲ ಅಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಒದಗಿಸುವ ವಿಶ್ವವಿದ್ಯಾನಿಲಯದ ‘ಮಾರ್ಗ’ ಯೋಜನೆ ಅಭಿನಂದನಾರ್ಹ‘ ಎಂದು ಶ್ಲಾಘಿಸಿದರು.

ಉದ್ಯಮಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮ ರೂಪಿಸಿ, ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಒದಗಿಸುವ ಮೂಲಕ ಇಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಬೆಂಬಲ ಒದಗಿಸಬಹುದು.  ಸರ್ಕಾರಿ ಉದ್ಯೋಗ ಅವಕಾಶಗಳು ಕ್ಷೀಣಿಸಿರುವ ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯ ನೀಡದಿರುವ ಪರಿಣಾಮವಾಗಿ ಸಾಮಾಜಿಕ ನ್ಯಾಯ ಮರೀಚಿಕೆಯಾಗಿದೆ ಎಂದು ಅವರು ವಿಷಾದಿಸಿದರು.

ADVERTISEMENT

ಸದ್ಯದ ಪರಿಸ್ಥಿತಿಯಲ್ಲಿ ಸಾರ್ವಜನಿಕ– ಖಾಸಗಿ ಸಹಭಾಗಿತ್ವ ಮಾದರಿ ಸರಿಯಾದ ಆಯ್ಕೆಯಾಗಬಹುದು. ಸರ್ಕಾರ ‘ಉದ್ಯೋಗ ಮಿತ್ರ’ ನಿಯತಕಾಲಿಕವನ್ನು ಪುನರಾರಂಭಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ. ದಯಾನಂದ ಮಾತನಾಡಿ, ‘ಗುರಿ, ಆರೋಗ್ಯ, ಶಿಕ್ಷಣ, ಜ್ಞಾನ, ನಡತೆ ಹೊಂದಿದ್ದರೆ  ಜೀವನದ ಪರೀಕ್ಷೆಯಲ್ಲಿ ಪಾಸ್ ಆಗುತ್ತೇವೆ. ಜೀವನದಲ್ಲಿ ಗುರಿ ದೊಡ್ಡದಿರಬೇಕು, ಅನುತ್ತೀರ್ಣರಾದರೆ ನಿರಾಶರಾಗಬಹುದು. ಕೆಟ್ಟ ವಿಷಯದ ಕಡೆ ಆಕರ್ಷಿತರಾಗದೆ ಮನಸ್ಸು ಹದಗೊಳಿಸಿ, ಸಾಧನೆಯತ್ತ ಸಾಗಬೇಕು ಎಂದು ಕಿವಿಮಾತು ಹೇಳಿದರು. 

ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಎಸ್. ಕೇದಾರ್  ಮಾತನಾಡಿ,  ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಫೌಂಡೇಷನ್ ಕೋರ್ಸ್‌ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ನೀಡಲಾಗುವುದು ಎಂದರು.  

ಉದ್ಯೋಗ ಮತ್ತು ಸಿ.ಎಸ್.ಆರ್, ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ನೋಡಲ್ ಅಧಿಕಾರಿ ಪ್ರೊ. ಎ.ನಾರಾಯಣ ಪ್ರಸಾದ್ ಮಾತನಾಡಿದರು.

ಕುಲಪತಿ ಬಿ. ರಮೇಶ್ ಮಾತನಾಡಿ, ಬಹುತ್ವದ ನೆಲೆಯ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಮತ್ತು ಸಮಸಮಾಜ ನಿರ್ಮಾಣದ ಗುರಿ ಸಾಧನೆಗೆ ನಾಗರಿಕ ಸೇವೆ ಉತ್ತಮ ಅವಕಾಶವೆಂದು ವಿವರಿಸಿದರು.

ಕುಲಸಚಿವ ಎ. ನವೀನ್ ಜೋಸೆಫ್ ಸ್ವಾಗತಿಸಿದರು. ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ. ಮೇಧಾ ಇಟಗಿ ಹುಯಿಲಗೋಳ ಪ್ರಾಸ್ತಾವಿಕ ಭಾಷಣ ಮಾಡಿದರು. ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ , ಸಿಂಡಿಕೇಟ್ ಸದಸ್ಯೆ ಆಯಿಷಾ ಫರ್ಜಾನ, ವಾಣಿಶ್ರೀ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.