ADVERTISEMENT

ಸಿಜೆಐ ಕುರಿತು ಅವಹೇಳನಕಾರಿ ಕಮೆಂಟ್: ಐದು ಖಾತೆಗಳ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 14:23 IST
Last Updated 11 ಅಕ್ಟೋಬರ್ 2025, 14:23 IST
   

ಬೆಂಗಳೂರು: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದ ಐದು ಖಾತೆಗಳ ವಿರುದ್ಧ ನಗರದ ಸೈಬರ್ ಅಪರಾಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕೇಸರಿ ನಂದನ್, ಶ್ರೀಧರ್ ಕುಮಾರ್, ನಾಗೇಂದ್ರ ಪ್ರಸಾದ್, ರಮೇಶ್ ನಾಯ್ಕ್ ಹಾಗೂ ಎಂ.ಸಿ. ಮಂಜು ಹೆಸರಿನ‌ ಖಾತೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ‌ ಕಾಯ್ದೆಯ ಸೆಕ್ಷನ್‌ಗಳಾದ 67, 66 ಹಾಗೂ 66(ಸಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 352ರ ಅಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಪ್ರಕರಣವೊಂದರ ಕುರಿತು ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದ ಆರೋಪಿಗಳು, ಸುಪ್ರೀಂ ಕೋರ್ಟ್ ಸಿಜೆಐ ಕುರಿತು ಕೆಟ್ಟದಾಗಿ ಹಾಗೂ ಬೆದರಿಕೆ ಒಡ್ಡುವಂತಹ ಕಾಮೆಂಟ್ ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ಸೈಬರ್ ಅಪರಾಧ ಸಾಮಾಜಿಕ ಜಾಲತಾಣ ವಿಭಾಗದ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ADVERTISEMENT

ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಪ್ರಕರಣದಲ್ಲಿ ವಕೀಲ ರಾಕೇಶ್‌ ಕಿಶೋರ್ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಕಳೆದ ಬುಧವಾರ ಎಫ್‌ಐಆರ್ ದಾಖಲಾಗಿತ್ತು. ವಕೀಲ ಭಕ್ತವತ್ಸಲ ಅವರು ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.