ADVERTISEMENT

ಸರ್ಕಾರಿ ಜಾಗ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 20:11 IST
Last Updated 4 ಜುಲೈ 2018, 20:11 IST
ಕೋಗಿಲು ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ ಕಟ್ಟಡಗಳನ್ನು ಬುಧವಾರ ತೆರವುಗೊಳಿಸಲಾಯಿತು 
ಕೋಗಿಲು ಗ್ರಾಮದ ಸರ್ಕಾರಿ ಗೋಮಾಳದಲ್ಲಿ ಒತ್ತುವರಿ ಮಾಡಿ ನಿರ್ಮಿಸಿದ ಕಟ್ಟಡಗಳನ್ನು ಬುಧವಾರ ತೆರವುಗೊಳಿಸಲಾಯಿತು    

ಬೆಂಗಳೂರು: ಉತ್ತರ ತಾಲ್ಲೂಕು ಯಲಹಂಕ ಹೋಬಳಿ ಕೋಗಿಲು ಗ್ರಾಮದ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ನಿರ್ಮಿಸಿದ ಮನೆ ಹಾಗೂ ನಿವೇಶನಗಳನ್ನು ಬುಧವಾರ ಜಿಲ್ಲಾಡಳಿತದ ವತಿಯಿಂದ ತೆರವುಗೊಳಿಸಲಾಯಿತು.

ಸ್ಥಳೀಯರ ದೂರಿನ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳ ತಂಡವು ಪೊಲೀಸರ ಭದ್ರತೆಯೊಂದಿಗೆ ಬುಧವಾರ ಕಾರ್ಯಾಚರಣೆ ನಡೆಸಿತು. ಬೆಂಗಳೂರು ಉತ್ತರ ತಾಲ್ಲೂಕು ಹೆಚ್ಚುವರಿ ತಹಶೀಲ್ದಾರ್ ಬಿ.ಆರ್.ಮಂಜುನಾಥ್ ಪ್ರತಿಕ್ರಿಯಿಸಿ, ‘ಕೋಗಿಲು ಗ್ರಾಮದ ಸರ್ವೇ ನಂ. 99ರಲ್ಲಿ 2 ಎಕರೆ ಸರ್ಕಾರಿ ಗೋಮಾಳ ಜಾಗದಲ್ಲಿ ಅರ್ಧಭಾಗದಷ್ಟು ನಿರ್ಮಿಸಿದ್ದ 7 ಕಟ್ಟಡಗಳೂ ಸೇರಿದಂತೆ 50 ಮನೆಗಳನ್ನು ನಿರ್ಮಿಸಲು ಅಳವಡಿಸಿದ್ದ ಪಾಯಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ 4 ವಾಸದ ಮನೆಗಳಿದ್ದು, ಕುಟುಂಬ ಸದಸ್ಯರಿಗೆ ನೋಟಿಸ್‌ ಜಾರಿ ಮಾಡಿ ತೆರವಿಗೆ ಒಂದು ವಾರ ಗಡುವು ನೀಡಲಾಗಿದೆ’ ಎಂದು ತಿಳಿಸಿದರು.

ಶ್ರೀನಿವಾಸಪುರ ಗ್ರಾಮದ ಸರ್ವೆ ನಂ. 22ರಲ್ಲಿ 1.21 ಎಕರೆ ಸ್ಮಶಾನದ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನಾಗಿಸಿ, ಮಾರಾಟ ಮಾಡಿದ್ದಾರೆ. ಈ ಜಾಗದಲ್ಲಿ ಈಗಾಗಲೇ ಕೆಲವರು 20ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಸ್ಮಶಾನ ಜಾಗವೂ ಒತ್ತುವರಿಯಾಗಿದೆ. ಇವೆಲ್ಲವನ್ನೂ ತೆರವುಗೊಳಿಸಬೇಕು ಎಂದು ಸ್ಥಳೀಯರು ದೂರಿನಲ್ಲಿ ಹೇಳಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.