ಬೆಂಗಳೂರು: ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳ ಕುರಿತು ಜಿಲ್ಲಾ ಮಟ್ಟದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ (ಇಎಂಪಿಆರ್‌ಐ) ಹವಾಮಾನ ಬದಲಾವಣೆ ವಿಭಾಗದ ಹಿರಿಯ ಸಮಾಲೋಚಕಿ ಸರಿತಾ ಹೇಳಿದರು.
ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ ಸಹಯೋಗದೊಂದಿಗೆ ಜನಶಿಕ್ಷಣ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ‘ಪರಿಸರ ಅರಿವು‘ ಸಮಾವೇಶದಲ್ಲಿ ‘ಕರ್ನಾಟಕ ಕೃಷಿಯ ಮೇಲೆ ಹವಾಮಾನ ಬದಲಾವಣೆ ಪರಿಣಾಮಗಳು’ ವಿಷಯ ಕುರಿತು ಅವರು ಮಾತನಾಡಿದರು.
‘ಹವಾಮಾನ ಬದಲಾವಣೆ ಕುರಿತು ರಾಜ್ಯ ಸರ್ಕಾರ ಕ್ರಿಯಾ ಯೋಜನೆ ರೂಪಿಸಿದ್ದು, ಇದರ ಬಗ್ಗೆ ಮೊದಲ ಹಂತದಲ್ಲಿ ಹತ್ತು ಜಿಲ್ಲೆಗಳ ಅಧಿಕಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಶನಿವಾರ ಚಾಲನೆ ನೀಡಲಾಗುವುದು’ ಎಂದರು.
ಜನವರಿಯಿಂದ ಆಕಾಶವಾಣಿಯಲ್ಲಿ ‘ಹವಾಮಾನ ಮಿತ್ರ’ ಕಾರ್ಯಕ್ರಮದ ಮೂಲಕವೂ ಹವಾಮಾನ ಬದಲಾವಣೆ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಹವಾಮಾನ ಕೇಂದ್ರಗಳು ಇವೆ. ಬೇಸಿಗೆಯಲ್ಲಿ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್‌ನಿಂದ 43 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಹವಾಮಾನ ಬದಲಾವಣೆಯಿಂದ ಅತಿಯಾದ ಮಳೆ, ಪ್ರವಾಹ, ಭೂಕುಸಿತ, ಬೆಳೆಗಳಿಗೆ ಹಾನಿಯಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಯಿಂದ ಬೆಳೆಗಳ ಇಳುವರಿಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ವಿವರಿಸಿದರು.
‘ಕರ್ನಾಟಕ ಕೃಷಿ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ’ ಕುರಿತು ಮಾತನಾಡಿದ ಐಸಿಐ ಪ್ರಾಧ್ಯಾಪಕಿ ಮಧುರಾ ಸ್ವಾಮಿನಾಥನ್, ಹವಾಮಾನ ಬದಲಾವಣೆಯಿಂದ ಕರ್ನಾಟಕ, ಕೇರಳದಲ್ಲಿ ಅತಿಯಾದ ಮಳೆ ಸುರಿದು, ಅನಾಹುತ ಸೃಷ್ಟಿ ಮಾಡಿತು. ಜಾಗತಿಕ ತಾಪಮಾನದಿಂದ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಕೃಷಿ ಬಿಟ್ಟು ಇತರೆ ಉದ್ಯೋಗ ಅರಸಿ ಪುರುಷರು ನಗರಕ್ಕೆ ಬರುತ್ತಿದ್ದಾರೆ. ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ‘ ಎಂದರು.
ಇದೇ ವೇಳೆ ಗಣ್ಯರು ‘ಹವಾಮಾನ ಬದಲಾವಣೆ ಬೇಕೆ ಈ ದಿನಗಳಲ್ಲಿ?’ ಪುಸ್ತಕ ಬಿಡುಗಡೆ ಮಾಡಿದರು.
ಇಎಂಪಿಆರ್‌ಐ (ಸಂಶೋಧನೆ) ನಿರ್ದೇಶಕ ಮಹೇಶ್, ಪರಿಸರ ಚಳಿವಳಿಕಾರ ಕೆ.ಎಸ್.ರವಿಕುಮಾರ್ ಮಾತನಾಡಿದರು. ಕೃಷಿ ವಿಜ್ಞಾನಿ ಜಿ.ಎನ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.