ಬೆಂಗಳೂರು: ‘ಕಾನೂನು ಪದವೀಧರರು ಕಾರ್ಪೊರೇಟ್ ವಲಯಕ್ಕೆ ಹೆಚ್ಚು ಆಕರ್ಷಿತರಾಗದೇ, ನ್ಯಾಯಾಲಯಗಳಲ್ಲಿ ವಕೀಲಿ ವೃತ್ತಿ ಜೀವನವನ್ನು ಪ್ರಾರಂಭಿಸಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಿ.ಎಂ.ಎಸ್. ಕಾನೂನು ಕಾಲೇಜು ನಗರದಲ್ಲಿ ಭಾನುವಾರ ಹಮ್ಮಿಕೊಂಡ ಬಿ.ಎಂ. ಶ್ರೀನಿವಾಸಯ್ಯ ಸ್ಮಾರಕ ‘9ನೇ ಅಣಕು ನ್ಯಾಯಾಲಯ ಸ್ಪರ್ಧೆ–2024’ರ ಸಮಾರೋಪ ಸಮಾರಂಭ ಉದ್ಘಾಟಿಸಿ, ಅವರು ಮಾತನಾಡಿದರು.
‘ವಕೀಲರ ನೈಜ ಪ್ರತಿಭೆ ಹೊರಬರುವುದೇ ನ್ಯಾಯಾಲಯಗಳಲ್ಲಿ. ಆದ್ದರಿಂದ ಕಾನೂನು ಪದವೀಧರರು ಕೌಶಲವನ್ನು ವೃದ್ಧಿಸಿಕೊಳ್ಳಬೇಕು. ಆರೋಪಿ, ದೂರುದಾರ, ಸಾಕ್ಷಿದಾರರಿಗೆ ಕ್ಷಣ ಮಾತ್ರದಲ್ಲಿ ಪಾಟಿ ಸವಾಲು ನಡೆಸಿ ಉತ್ತರ ಪಡೆಯುವುದೇ ಕಲೆ. ಕಾನೂನು ಪದವಿ ಪಡೆದ ಮುಂದಿನ ಐದು ವರ್ಷಗಳು ನ್ಯಾಯಾಲಯಗಳಲ್ಲಿ ಕೌಶಲ ವೃದ್ಧಿಸಿಕೊಳ್ಳುವ ಕಡೆಗೆ ಗಮನ ಕೊಡಬೇಕು. ಕೌಶಲ ವೃದ್ಧಿಸಿಕೊಂಡಲ್ಲಿ ಪ್ರಕರಣಗಳನ್ನು ಜಯಿಸುವುದು ಸುಲಭವಾಗುತ್ತದೆ’ ಎಂದು ಹೇಳಿದರು.
ಹೈಕೋರ್ಟ್ ವಕೀಲ ಸುದೀಶ್ ಪೈ ಮಾತನಾಡಿ, ‘ವಕೀಲರಿಗೆ ಪ್ರಕರಣಗಳ ಬಗ್ಗೆ ಸಂಪೂರ್ಣ ಜ್ಞಾನವಿರಬೇಕು. ಕಾನೂನನ್ನು ಅರ್ಥೈಸಿಕೊಂಡು ಉತ್ತಮ ಸಂವಹನ ಕಲೆಯನ್ನು ಬೆಳೆಸಿಕೊಳ್ಳುವುದು ಮುಖ್ಯ. ಕಾನೂನು ಕಾಲೇಜುಗಳಲ್ಲಿ ಇಂತಹ ಸ್ಪರ್ಧೆ ಏರ್ಪಡಿಸಿದಲ್ಲಿ ವಕೀಲ ವೃತ್ತಿಯ ಆಳ–ಅಗಲವನ್ನು ತಿಳಿದುಕೊಳ್ಳಬಹುದು’ ಎಂದರು.
ರಾಷ್ಟ್ರೀಯ ಕಾನೂನು ಶಾಲೆಯ ನಿವೃತ್ತ ಪ್ರಾಧ್ಯಾಪಕ ಎಂ.ಕೆ. ರಮೇಶ್ ಮಾತನಾಡಿ, ‘ಇಂತಹ ಸ್ಪರ್ಧೆಗಳಿಂದ ವಿಚಾರಣೆ ಮತ್ತು ವಾದ ಮಂಡನೆಯ ವಿವಿಧ ಆಯಾಮಗಳನ್ನು ತಿಳಿದುಕೊಳ್ಳಬಹುದು. ವೃತ್ತಿ ಜೀವನದಲ್ಲಿ ವಾದ ಮಂಡಿಸುವಾಗ ನ್ಯಾಯಸಮ್ಮತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವತ್ತ ಗಮನಹರಿಸಬೇಕು’ ಎಂದು ಹೇಳಿದರು.
ಅನೋಮಾ ಲೀಗಲ್‌ನ ವಿಶಾಲ್ ಭಟ್, ಬಿಎಂಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲೆ ಅನಿತಾ ಎಫ್. ಎನ್. ಡಿಸೋಜಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.