ADVERTISEMENT

ಸಾರಿಗೆ ಸಂಸ್ಥೆಗಳಲ್ಲಿ ಆದಾಯ ಸೋರಿಕೆ ತಡೆಯಬೇಕು: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 8:07 IST
Last Updated 27 ಡಿಸೆಂಬರ್ 2021, 8:07 IST
40 ಎಲೆಕ್ಟ್ರಿಕ್‌ ಬಸ್‌ ಮತ್ತು 150 ಬಿಎಸ್‌-6 ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು
40 ಎಲೆಕ್ಟ್ರಿಕ್‌ ಬಸ್‌ ಮತ್ತು 150 ಬಿಎಸ್‌-6 ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು   

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಲ್ಲಿ ಆದಾಯ ಸೋರಿಕೆಯನ್ನು ತಡೆಯಬೇಕು. ಸಂಸ್ಥೆಗಳನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಕಟ್ಟುವುದಕ್ಕೆ ಪೂರಕವಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಮುಂಭಾಗದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಖರೀದಿಸಿರುವ 40 ಎಲೆಕ್ಟ್ರಿಕ್‌ ಬಸ್‌ ಮತ್ತು 150 ಬಿಎಸ್‌-6 ಬಸ್‌ಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಅವರು ಮಾತನಾಡಿದರು.

ಖಾಸಗಿ ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ. ಆದರೆ, ಸರ್ಕಾರಿ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಆದಾಯ ಸೋರಿಕೆಯೇ ಇದಕ್ಕೆ ಮುಖ್ಯ ಕಾರಣ. ಎಲ್ಲ ಹಂತದಲ್ಲೂ ಸೋರಿಕೆ ತಡಯಬೇಕು. ಇದಕ್ಕಾಗಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳನ್ನು ಮತ್ತೆ ಲಾಭದ ಸ್ಥಿತಿಗೆ ತರಬೇಕು ಎಂದು ಸೂಚಿಸಿದರು.

ADVERTISEMENT

ಸಹಾಯಧನದ ಆಧಾರದಲ್ಲಿ ಸಾರಿಗೆ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯ. ಇದು ನಮ್ಮ ಮುಂದಿರುವ ಸವಾಲು. ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಶಿಫಾರಸು ಆಧರಿಸಿ ಸಾರಿಗೆ ಸಂಸ್ಥೆಗಳ ಸ್ವರೂಪವನ್ನು ಮರು ವಿನ್ಯಾಸ ಮಾಡಲಾಗುವುದು ಎಂದು ಹೇಳಿದರು.

ಬಿಎಸ್‌-6 ದರ್ಜೆಯ ವಾಹನಗಳು ಕಡಿಮೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಅವುಗಳನ್ನು ಬಿಎಂಟಿಸಿ ಅಳವಡಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ. ಅದರ ಜತೆಯಲ್ಲೇ ಮಾಲಿನ್ಯ ಮುಕ್ತವಾದ ಎಲೆಕ್ಟ್ರಿಕ್‌ ಬಸ್‌ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ ಎಂದರು.

300 ಎಲೆಕ್ಟ್ರಿಕ್‌ ಬಸ್‌ಗಳು ಮತ್ತು 600 ಬಿಎಸ್‌-6 ಬಸ್‌ಗಳನ್ನು ಬಿಎಂಟಿಸಿ ಮೂಲಕ ಸೇವೆಗೆ ಒದಗಿಸುವ ಗುರಿ ಇದೆ. ಮೊದಲ ಹಂತದಲ್ಲಿ 40 ಎಲೆಕ್ಟ್ರಿಕ್‌ ಬಸ್‌ಗಳು ಮತ್ತು 150 ಬಿಎಸ್‌-6 ಬಸ್‌ಗಳನ್ನು ಈಗ ಸೇವೆಗೆ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬೃಹತ್‌ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸಾರ್ವಜನಿಕ ಸಾರಿಗೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಸಂಸದ ಪಿ.ಸಿ. ಮೋಹನ್‌, ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ, ಉಪಾಧ್ಯಕ್ಷ ವೆಂಕಟೇಶ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ. ರಮೇಶ್‌ ಗೌಡ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.