ADVERTISEMENT

ಮೋದಿ ಹಣ ಕಳುಹಿಸುತ್ತಾರಾ?-ರೈತನಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 19:47 IST
Last Updated 22 ನವೆಂಬರ್ 2018, 19:47 IST
   

ಬೆಂಗಳೂರು: ‘ಬಾಗಲಕೋಟೆಯ ಯಾರೋ ಒಬ್ಬ ರೈತ ಪುಣ್ಯಾತ್ಮ ಈರುಳ್ಳಿಯ ಬೆಲೆ ಕುಸಿದಿದೆ ಅಂತ ಮೋದಿಗೆ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದಾನಂತೆ. ನಾಳೆ ಬೆಳಿಗ್ಗೆಯೇ ಮೋದಿ ಏನು ಹಣ ಕಳುಹಿಸುತ್ತಾರಾ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

‘ಬಡವರ ಬಂಧು ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಅದೆನೋ ಜನ್‌ಧನ್ ಅಂತ ಯೋಜನೆ ತಂದಿತು. ಮೋದಿ ಈ ಹಿಂದೆ ಹೇಳಿದಂತೆ ₹ 15 ಲಕ್ಷ ಹಣವನ್ನು ಜನ್‌ಧನ್‌ ಖಾತೆಗೆ ಹಾಕಿದರಾ’ ಎಂದು ಹರಿಹಾಯ್ದರು.

‘ಮಹಾರಾಷ್ಟ್ರದಲ್ಲೂ ಈರುಳ್ಳಿ ಬೆಲೆ ಕುಸಿದು 20 ಸಾವಿರ ರೈತರು ಪಾದಯಾತ್ರೆ ಮಾಡುತ್ತಿದ್ದಾರೆ. ಅಲ್ಲಿಯೂ ಬಿಜೆಪಿ ಸರ್ಕಾರವಿದೆ. ಯಡಿಯೂರಪ್ಪರಿಗೆ ರೈತರ ಮೇಲೆ ಕಾಳಜಿ ಇದ್ದರೆ, ಅಲ್ಲಿಗೂ ಹೋಗಿ ಧರಣಿ ಮಾಡಲಿ’ ಎಂದು ಕುಟುಕಿದರು.

ADVERTISEMENT

‘ನಾನೇನು ಗೂಟ ಹೊಡೆದುಕೊಂಡುಅಧಿಕಾರದಲ್ಲಿ ಕೂರಲು ಬಂದಿಲ್ಲ. ಕಾಂಗ್ರೆಸ್‌ನ ಬೆಂಬಲ ಇರುವವರೆಗೂ ಜನಪರ ಆಡಳಿತ ನಡೆಸುತ್ತೇನೆ’ ಎಂದು ಹೇಳಿದರು.

‘ನನಗಿಂತ ಮುಂಚೆ ಇಪ್ಪತ್ತಕ್ಕೂ ಹೆಚ್ಚು ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ.ಅಧಿಕಾರ ಶಾಶ್ವತ ಅಲ್ಲ. ಇರುವಷ್ಟು ದಿನ ತೆರಿಗೆದಾರರ ಹಣವನ್ನು ರಾಜ್ಯದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸುತ್ತೇನೆ’ ಎಂದರು.

‘ಒಂದು ವರ್ಗಕ್ಕೆ ಕಾಮಾಲೆ ಕಣ್ಣುಗಳಿವೆ. ಹಾಗಾಗಿ ನಾನು ಹೇಳಿದ್ದು, ಮಾಡಿದ್ದು ತಪ್ಪು ಎಂದೇ ಅವರಿಗೆ ಕಾಣುತ್ತದೆ’ ಎಂದು ವಿರೋಧ ಪಕ್ಷದ ವಿರುದ್ಧ ಹರಿಹಾಯ್ದರು.

‘ಬೇಕಾದ್ರೆ ಬರೆದುಕೊಳ್ಳಿ, ಬೇಡವಾದ್ರೆ ಬಿಡಿ’

‘ನಾನು ಏನೇ ಹೇಳಿದರೂ, ಅದನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ. ಬೇರೆನೋ ಅರ್ಥ ಕಲ್ಪಿಸಲಾಗುತ್ತಿದೆ. ಹಾಗಾಗಿ ಇನ್ನು ಮುಂದೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದಿಲ್ಲ. ವೇದಿಕೆ ಮೇಲಷ್ಟೆ ಅಭಿಪ್ರಾಯ ತಿಳಿಸುತ್ತೇನೆ. ಬೇಕಾದ್ರೆ ಬರೆದುಕೊಳ್ಳಿ, ಬೇಡವಾದ್ರೆ ಬಿಡಿ’ ಎಂದು ಕುಮಾರಸ್ವಾಮಿ ಹೇಳಿದರು. ‘ಈಗ ಮಾಧ್ಯಮದವರ ಸಮಿತಿ ಮಾಡಿ, ಅವರಿಂದ ಸಲಹೆಗಳನ್ನು ಪಡೆದು, ಮಾತನಾಡುವ ಪರಿಸ್ಥಿತಿಗೆ ಬಂದಿದ್ದೇನೆ’ ಎಂದು ಹೇಳಿದರು.

ಈ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಚಿವಾಲಯ, ‘ಕೆಲವು ಮಾಧ್ಯಮಗಳು ಮುಖ್ಯಮಂತ್ರಿ ಹೇಳಿಕೆಯನ್ನು ತಿರುಚಿ, ಸುದ್ದಿ ಬಿತ್ತರಿಸುತ್ತಿವೆ. ಪ್ರತಿಯೊಂದನ್ನೂ ವಿವಾದವಾಗಿಸುತ್ತಿವೆ. ಅನಗತ್ಯವಾಗಿ ವಿವಾದಕ್ಕೀಡಾಗುವುದನ್ನು ತಪ್ಪಿಸಿಕೊಳ್ಳಲು ಮಾಧ್ಯಮಗಳಿಂದ ಅಂತರ ಕಾಯ್ದುಕೊಳ್ಳಲು ಅವರು ನಿರ್ಧರಿಸಿದ್ದಾರೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.