ADVERTISEMENT

ಮುಂಗಾರು ಮಳೆ: ಕ್ರಮ ಕೈಗೊಳ್ಳಲು ಸಿ.ಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಮೇ 2019, 20:17 IST
Last Updated 8 ಮೇ 2019, 20:17 IST

ಬೆಂಗಳೂರು: ನಗರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಯಿಂದ ಸಂಸ್ಥೆಗೆ ಒಟ್ಟಾರೆ ₹ 76 ಲಕ್ಷ ನಷ್ಟವಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ತಿಳಿಸಿದರು.

ಮಳೆಯಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ‌ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬಿಬಿಎಂಪಿ, ಬಿಡಿಎ ಮತ್ತು ಬೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಮಳೆಯಿಂದಾಗಿ ತಗ್ಗುಪ್ರದೇಶಗಳಲ್ಲಿ ನೀರು ನಿಂತಿದೆ. ವಿದ್ಯುತ್ ಕಂಬಗಳು ಉರುಳಿವೆ. ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಈ ಸಂಬಂಧ ತುರ್ತು ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಾನಿಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದ ಶಿಖಾ, ‘ಬೆಸ್ಕಾಂನ 295 ಕಂಬಗಳು ಮುರಿದಿವೆ. ಈ ಪೈಕಿ, ಬೆಂಗಳೂರಿನಲ್ಲಿ 80 ಕಂಬಗಳು ಬಿದ್ದಿವೆ. ತೆರೆದ ವಿದ್ಯುತ್ ತಂತಿಗಳನ್ನು ಸರಿಪಡಿಸುವುದು, ಮುರಿದ ಮರದ ಕೊಂಬೆಗಳನ್ನು ತುಂಡರಿಸುವುದು ಹಾಗೂ ಪರಿವರ್ತಿತ ಕೇಂದ್ರಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. 134 ಅಪಾಯದ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ 63 ಸಮಸ್ಯೆಗಳನ್ನು ಬಗೆಹರಿಸಲಾಗಿದೆ’ ಎಂದರು.

ADVERTISEMENT

‘ಬೆಂಗಳೂರಿನ ಎಲ್ಲ ಬೀದಿದೀಪಗಳನ್ನು ಎಲ್‌ಇಡಿಗೆ ಪರಿವರ್ತಿಸುವ ಕಾರ್ಯ ಆರಂಭವಾಗಿದೆ. ಹೊಸ ಅಥವಾ ಹಳೆಯ ಬಡಾವಣೆಗಳಲ್ಲಿ ವಿದ್ಯುತ್‌ ವಿಸ್ತರಣೆಗಳನ್ನು ಕೈಗೊಳ್ಳುವ ಸಂದರ್ಭಗಳಲ್ಲಿ ಬೆಸ್ಕಾಂನಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದರಿಂದಾಗಿ ಅನಾಹುತಗಳನ್ನು ತಪ್ಪಿಸಲು ಸಾಧ್ಯ’ ಎಂದರು.

‘ಕಸ ವಿಲೇವಾರಿ, ರಸ್ತೆ ದುರಸ್ತಿ, ಫುಟ್‌ಪಾತ್‌ ನಿರ್ಮಾಣ, ಟೆಂಡರ್ ಶ್ಯೂರ್ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಲಾಗಿದೆ’ ಎಂದು ನಗರಾಭಿವೃದ್ದಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದರು.

‘ಕಂದಾಯ ನಿವೇಶನಗಳಲ್ಲಿ ವಿದ್ಯುತ್ ತಂತಿಗಳ ಬಳಿ ಕಟ್ಟಡ ನಿರ್ಮಾಣವಾಗುತ್ತಿರುವ ಸಂಖ್ಯೆ ಹೆಚ್ಚಿದೆ. ಪಾಲಿಕೆ ಸದಸ್ಯರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ, ಬಿಡಿಎ, ಬೆಸ್ಕಾಂ ಇಲಾಖೆಗಳ ಸಮನ್ವಯ ಸಮಿತಿ ಸಭೆ ಕರೆದು 10-15 ದಿನಗಳಲ್ಲಿ ಸಮಸ್ಯೆ ಬಗೆಹರಿಸಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದರು.

ಶಾಸಕ ಆರ್‌. ಗೋಪಾಲಯ್ಯ, ಮೇಯರ್‌ ಗಂಗಾಂಬಿಕೆ, ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಕಾಲೇಜು ಶಿಕ್ಷಣ ಇಲಾಖೆ ಆಯಕ್ತರಾದ ಎನ್. ಮಂಜುಳಾ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.