ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿನ್ನಿಮಿಲ್ ರಸ್ತೆಯಲ್ಲಿರುವ ಘನತ್ಯಾಜ್ಯದ ದ್ವಿತೀಯ ಹಂತದ ವರ್ಗಾವಣೆ ಘಟಕಕ್ಕೆ ಗುರುವಾರ ಚಾಲನೆ ನೀಡಿದರು. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ವಸತಿ ಸಚಿವ ಜಮೀರ್ ಅಹಮದ್ ಖಾನ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯ ಆಟೊಗಳಿಂದ ನೇರವಾಗಿ ವಿಂಗಡಣೆ ಘಟಕಕ್ಕೆ ವಿಲೇವಾರಿಯಾಗುವ ‘ದ್ವಿತೀಯ ಹಂತದ ವರ್ಗಾವಣೆ ಘಟಕ’ಕ್ಕೆ (ಎಸ್‌ಟಿಎಸ್) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು.
ಚಾಮರಾಜಪೇಟೆ ಹಾಗೂ ಗಾಂಧಿನಗರ ವಿಧಾನಸಭೆ ಕ್ಷೇತ್ರಗಳ ಒಂಬತ್ತು ವಾರ್ಡ್‌ಗಳ ತ್ಯಾಜ್ಯವನ್ನು ಆಟೊಗಳ ಮೂಲಕ ಘಟಕಗಳಲ್ಲಿ ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಬೃಹತ್ ಕಂಟೈನರ್‌ಗಳಲ್ಲಿ (ಕ್ಯಾಪ್ಸೂಲ್) ಯಾವುದೇ ದ್ರವತ್ಯಾಜ್ಯ ಹೊರಬೀಳದಂತೆ ಸಂಸ್ಕರಣೆ ಘಟಕ ಅಥವಾ ಭೂಭರ್ತಿ ಸ್ಥಳಗಳಿಗೆ ರವಾನಿಸಿ ವಿಲೇವಾರಿ ಮಾಡಲಾಗುತ್ತದೆ.
‘ಮನುಷ್ಯನ ಆರೋಗ್ಯ ಅತ್ಯಂತ ಮುಖ್ಯ. ಹೀಗಾಗಿ ಮನೆ, ರಸ್ತೆ ಸುತ್ತಮುತ್ತ ತ್ಯಾಜ್ಯ ಇಲ್ಲದೆ ಸ್ವಚ್ಛ ಇರುವುದು ಅಗತ್ಯ. ಎಸ್‌ಟಿಎಸ್ ವ್ಯವಸ್ಥೆಯಿಂದ ಸ್ವಚ್ಛತೆ ಜೊತೆಗೆ, ಒಣ ತ್ಯಾಜ್ಯ, ಹಸಿ ತ್ಯಾಜ್ಯ ಸ್ವಯಂಚಾಲಿತವಾಗಿ ವಿಂಗಡಣೆಯಾಗುತ್ತದೆ. ಯಾವುದೇ ರೀತಿಯ ವಾಸನೆ ಇಲ್ಲದೆ ಘಟಕ ಕಾರ್ಯ ನಿರ್ವಹಿಸುತ್ತದೆ. ಇಂತಹ ವ್ಯವಸ್ಥೆ ಎಲ್ಲೆಡೆ ಕ್ಷಿಪ್ರವಾಗಿ ಬರಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಳ್ಳೆಯ ಸೌಲಭ್ಯವಿದೆ. ಕೆಲವು ಬಾರಿ ಲೋಪಗಳಾಗಿರಬಹುದು. ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.
ಎಸ್‌ಟಿಎಸ್‌ಗಳಿಂದ ಸಂಸ್ಕರಣೆ ಘಟಕಕ್ಕೆ ಬೃಹತ್ ಕಂಟೈನರ್‌ಗಳ ಮೂಲಕ ತ್ಯಾಜ್ಯವನ್ನು ಸಾಗಿಸಲಾಗುತ್ತಿದೆ. ಈ ವಾಹನಗಳು ದ್ರವತ್ಯಾಜ್ಯ ಸೋರಿಕೆಯಾಗದಂತೆ ತಡೆಯುವ ತಂತ್ರಜ್ಞಾನವನ್ನು ಹೊಂದಿವೆ. ಪ್ರಸ್ತುತ ಪಾಲಿಕೆಯಲ್ಲಿ 14 ಘನ ಮೀಟರ್ ಸಾಮರ್ಥ್ಯದ ಕಾಂಪ್ಯಾಕ್ಟರ್‌ಗಳು ತ್ಯಾಜ್ಯವನ್ನು ಸಾಗಿಸುತ್ತಿವೆ. ಎಸ್‌ಟಿಎಸ್‌ಗಳಿಂದ 20 ಘನ ಮೀಟರ್ ಸಾಮರ್ಥ್ಯದ ಕಂಟೈನರ್‌ಗಳ ಮೂಲಕ ತ್ಯಾಜ್ಯ ಸಾಗಿಸುವುದರಿಂದ ವಾಹನಗಳ ಸಂಖ್ಯೆ ಕಡಿಮೆಯಾಗಿ, ವಾಯುಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದಂತೆ ತ್ಯಾಜ್ಯವನ್ನು ಯಾಂತ್ರೀಕೃತವಾಗಿ ಹಾಗೂ ವೈಜ್ಞಾನಿಕವಾಗಿ ನಿರ್ವಹಿಸಬಹುದು ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಅಧಿಕಾರಿಗಳು ಮಾಹಿತಿ ನೀಡಿದರು.
‘ವಿಂಗಡಣೆಯಾಗದ ಕಸವನ್ನೂ ಎಸ್‌ಟಿಎಸ್‌ನಲ್ಲಿ ಸ್ವಯಂಚಾಲಿತ ಯಂತ್ರದ ಮೂಲಕ ವಿಂಗಡಣೆ ಮಾಡಲಾಗುತ್ತದೆ’ ಎಂದರು.
ಬಿನ್ನಿಮಿಲ್ ರಸ್ತೆಯಲ್ಲಿರುವ ಘನತ್ಯಾಜ್ಯದ ದ್ವಿತೀಯ ಹಂತದ ವರ್ಗಾವಣೆ ಘಟಕದಲ್ಲಿರುವ ಕಂಟೈನರ್‌ಗಳು (ಕ್ಯಾಪ್ಸೂಲ್)
ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಜಗಜೀವನರಾಮ್ ನಗರ ರಾಯಪುರ ಛಲವಾದಿಪಾಳ್ಯ ಕೆ.ಆರ್. ಮಾರುಕಟ್ಟೆ (ಮಾರುಕಟ್ಟೆ ಪ್ರದೇಶ ಹೊರತುಪಡಿಸಿ) ಚಾಮರಾಜಪೇಟೆ ಆಜಾದ್ ನಗರ ವಾರ್ಡ್ ಹಾಗೂ ಗಾಂಧಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಾಟನ್‌ಪೇಟೆ ಬಿನ್ನಿಪೇಟೆ ಚಿಕ್ಕಪೇಟೆ ವಾರ್ಡ್‌ಗಳಿಂದ ಆಟೊಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಬಿನ್ನಿಪೇಟೆಯಲ್ಲಿರುವ ‘ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ’ಕ್ಕೆ ರವಾನೆಯಾಗಲಿದೆ.
ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಈಜಿಪುರದಲ್ಲಿ 2024ರ ಮಾರ್ಚ್ 13ರಂದು ಎಸ್‌ಟಿಎಸ್ ಕಾರ್ಯಾರಂಭ
ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಛಲವಾದಿಪಾಳ್ಯದಲ್ಲಿ 2024ರ ನವೆಂಬರ್ 28ರಂದು ಚಾಲನೆ
ಸರ್ವಜ್ಞನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಎಚ್‌ಬಿಆರ್ ಬಡಾವಣೆ ಪ್ರದೇಶದಲ್ಲಿ ಎಸ್‌ಟಿೆಸ್ ನಿರ್ಮಾಣವಾಗುತ್ತಿದ್ದು 2025 ಜನವರಿಗೆ ಪೂರ್ಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.