ADVERTISEMENT

ಸಂವಿಧಾನ ವಿರೋಧಿಗಳು ಶರಣ ಸಾಹಿತ್ಯ ಒಪ್ಪುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿವಿಧ ಕ್ಷೇತ್ರಗಳ ಸಾಧಕರಿಗೆ ‘ರಮಣಶ್ರೀ ಶರಣ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 16:38 IST
Last Updated 16 ನವೆಂಬರ್ 2023, 16:38 IST
<div class="paragraphs"><p>ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಎನ್. ತಿಮ್ಮಪ್ಪ, ಓಂಕಾರ್‌ನಾಥ್ ಹವಾಲ್ದಾರ್, ಬಸವರಾಜ ಸಾದರ, ಎ.ಜೆ. ಶಿವಕುಮಾರ್, ದೇವರಾಜು ಪಿ. ಚಿಕ್ಕಹಳ್ಳಿ, ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಜೆ.ಎಸ್. ಖಂಡೇರಾವ್, ವೀಣಾ ಬನ್ನಂಜೆ, ಕುಮಾರ ಕಣವಿ ಮತ್ತು ಸ್ನೇಹಾ ಕಪ್ಪಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. </p></div>

ಕಾರ್ಯಕ್ರಮದಲ್ಲಿ (ಕುಳಿತವರು ಎಡದಿಂದ) ಎನ್. ತಿಮ್ಮಪ್ಪ, ಓಂಕಾರ್‌ನಾಥ್ ಹವಾಲ್ದಾರ್, ಬಸವರಾಜ ಸಾದರ, ಎ.ಜೆ. ಶಿವಕುಮಾರ್, ದೇವರಾಜು ಪಿ. ಚಿಕ್ಕಹಳ್ಳಿ, ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ, ಜೆ.ಎಸ್. ಖಂಡೇರಾವ್, ವೀಣಾ ಬನ್ನಂಜೆ, ಕುಮಾರ ಕಣವಿ ಮತ್ತು ಸ್ನೇಹಾ ಕಪ್ಪಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಂವಿಧಾನ ವಿರೋಧಿಗಳು ಶರಣ ಸಾಹಿತ್ಯವನ್ನೂ ಒಪ್ಪುವುದಿಲ್ಲ. ಇಂತಹ ಸಂವಿಧಾನ ವಿರೋಧಿಗಳನ್ನು ನಾವು ದೂರ ಇಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ADVERTISEMENT

ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ಜಂಟಿಯಾಗಿ ನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ರಮಣಶ್ರೀ ಶರಣ ಪ್ರಶಸ್ತಿ’ ಪ್ರದಾನ ಮಾಡಿ, ಎಸ್. ಷಡಕ್ಷರಿ ಅವರ ‘ಕ್ಷಣ ಹೊತ್ತು ಅಣಿಮುತ್ತು’ ಭಾಗ 12 ಮತ್ತು ಭಾಗ 13 ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ‘ಸಂವಿಧಾನ ಮತ್ತು ಶರಣ ಸಾಹಿತ್ಯದ ಆಶಯ ಒಂದೇ ಆಗಿದೆ. ಜಾತಿ ತಾರತಮ್ಯ ಇಲ್ಲದ ಸಮಾಜ ನಿರ್ಮಾಣ ಇವೆರಡರ ಗುರಿ’ ಎಂದು ತಿಳಿಸಿದರು. 

‘ಸಮಾಜದ ಋಣ ನಮ್ಮ ಮೇಲಿದೆ. ಆ ಋಣವನ್ನು ತೀರಿಸುವ ಮೂಲಕ ಬಸವಾದಿ ಶರಣರ ಆಶಯದ ಸಮಾಜ ನಿರ್ಮಾಣ ಮಾಡಬೇಕು. ನಾವು ವಿಶ್ವಮಾನವ ಆಗದಿದ್ದರೂ ಅಲ್ಪ ಮಾನವ ಆಗಬಾರದು. ಅಲ್ಪ ಮಾನವನಾದರೆ ನಮ್ಮ ಬದುಕು ವ್ಯರ್ಥ ಆಗುತ್ತದೆ’ ಎಂದರು.

ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ‘ಶರಣ ಸಾಹಿತ್ಯ ವಚನ ರೂಪದಲ್ಲಿ ಬರದಿದ್ದರೆ ಕನ್ನಡ ನಾಡು ಬಡವಾಗುತ್ತಿತ್ತು. ಶುದ್ಧ ಸಾಹಿತ್ಯದ ವಚನಗಳು ಶಾಶ್ವತ ರಚನೆಯಾಗಿವೆ. ಬದುಕಿನ ಪ್ರಶ್ನೆಗಳಿಗೆ ವಚನದಲ್ಲಿ ಉತ್ತರಗಳಿವೆ. ದೇವರು ಮತ್ತು ಮನುಷ್ಯರ ನಡುವಿನ ಮಧ್ಯವರ್ತಿಯನ್ನು ಬಸವಣ್ಣ ತೆಗೆದು ಹಾಕಿದರು’ ಎಂದು ಹೇಳಿದರು. 

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ, ‘ನಮ್ಮ ಪರಿಷತ್ತು ಲಿಂಗಾಯತರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದರಲ್ಲಿ ಎಲ್ಲ ಜಾತಿಯವರು ಇದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘದ ಮಾದರಿಯಲ್ಲಿ ನಮ್ಮ ಪರಿಷತ್ತಿಗೂ ಸರ್ಕಾರ ಶಾಶ್ವತ ಅನುದಾನ ಒದಗಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ, ‘ಶಾಶ್ವತ ಅನುದಾನಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. 

10 ಮಂದಿಗೆ ಪ್ರಶಸ್ತಿ ಪ್ರದಾನ 
ಕಾರ್ಯಕ್ರಮದಲ್ಲಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಗೆ ‘ರಮಣಶ್ರೀ ಶರಣ ಜೀವಮಾನ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದು ₹ 50 ಸಾವಿರ ನಗದು ಒಳಗೊಂಡಿದೆ. ವೀಣಾ ಬನ್ನಂಜೆ ಬಸವರಾಜ ಸಾದರ ಎನ್. ತಿಮ್ಮಪ್ಪ ಹಾಗೂ ಓಂಕಾರ್‌ನಾಥ್ ಹವಾಲ್ದಾರ್ ಅವರಿಗೆ ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ತಲಾ ₹ 40 ಸಾವಿರ ನಗದು ಒಳಗೊಂಡಿದೆ. ಎ.ಜೆ. ಶಿವಕುಮಾರ ದೇವರಾಜ ಪಿ. ಚಿಕ್ಕಹಳ್ಳಿ ಕುಮಾರ ಕಣವಿ ಹಾಗೂ ಜೆ.ಎಸ್. ಖಂಡೇರಾವ ಅವರಿಗೆ ‘ರಮಣಶ್ರೀ ಶರಣ ಉತ್ತೇಜನ ಶ್ರೇಣಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದು ತಲಾ ₹ 20 ಸಾವಿರ ನಗದು ಒಳಗೊಂಡಿದೆ. ಸ್ನೇಹಾ ಕಪ್ಪಣ್ಣ ಅವರಿಗೆ ‘ರಮಣಶ್ರೀ ಶರಣ ವಿಶೇಷ ಪುರಸ್ಕಾರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಪ್ರಶಸ್ತಿಯ ನಗದು ಹಾಗೂ ₹ 501 ಮೊತ್ತವನ್ನು ಪ್ರತಿಷ್ಠಾನಕ್ಕೆ ನೀಡಿದರು. ‘ಮುಂದಿನ ವರ್ಷದಿಂದ ವಚನ ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳನ್ನೂ ಗುರುತಿಸಿ ಗೌರವಿಸುವ ಕಾರ್ಯಕ್ಕೆ ಈ ಹಣವನ್ನು ಬಳಸಿಕೊಳ್ಳುವಂತೆ’ ಮನವಿ ಮಾಡಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.