ADVERTISEMENT

ಸಿ.ಎಂ. ವಿಶೇಷ ಅನುದಾನ: ₹50 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 16:11 IST
Last Updated 16 ನವೆಂಬರ್ 2025, 16:11 IST
   

ಬೆಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹5 ಕೋಟಿ ಕೊಡಿಸುವುದಾಗಿ ಹೇಳಿ ₹50 ಲಕ್ಷ ಪಡೆದು ವಂಚಿಸಿರುವ ಆರೋಪದಡಿ ಅನ್ನಪೂಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಾಗರಬಾವಿ ನಿವಾಸಿ ವೆಂಕಟೇಶ್ ಬಾಬು ಅವರ ದೂರು ಆಧರಿಸಿ ಹರೀಶ್ ಹಾಗೂ ಸಂದೀಪ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

2024ರ ಅಕ್ಟೋಬರ್ ತಿಂಗಳಲ್ಲಿ ದೂರುದಾರ ಮನೆಗೆ ಹೋಗಿದ್ದ ಆರೋಪಿ ಹರೀಶ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ಆಪ್ತ ಸಂದೀಪ್ ಎಂಬುವರ ಪರಿಚಯ ಇದೆ. ಶಾಸಕರ ಶಿಫಾರಸು ಪತ್ರದ ಆಧಾರದ ಮೇಲೆ ಸಿ.ಎಂ. ವಿಶೇಷ ಅನುದಾನದಲ್ಲಿ ₹5 ಕೋಟಿ ಬಿಡುಗಡೆ ಮಾಡಿಸಿಕೊಡಲಾಗುವುದು. ಅದಕ್ಕೆ ‌ಶೇಕಡ 10ರಂತೆ ₹50 ಲಕ್ಷ ಕಮಿಷನ್‌ ನೀಡಬೇಕೆಂದು ಹೇಳಿದ್ದಾರೆ.

ADVERTISEMENT

2024ರ ನವೆಂಬರ್‌ನಲ್ಲಿ ವೆಂಕಟೇಶ್ ಅವರಿಂದ ಆರೋಪಿಗಳು ₹25 ಲಕ್ಷ ಪಡೆದಿದ್ದಾರೆ. 2025ರ ಮಾರ್ಚ್‌ನಲ್ಲಿ ಪತ್ರ ಬಿಡುಗಡೆ ಹೆಸರಿನಲ್ಲಿ ಬಾಕಿ ಇದ್ದ ₹25 ಲಕ್ಷ ಹಣವನ್ನು ಸಹ ಸಂದೀಪ್, ಸರ್ಕಾರಿ ವಾಹನದಲ್ಲಿ ಡಬ್ಬಲ್ ರಸ್ತೆಯ ವಿಲ್ಸನ್ ಗಾರ್ಡ್‌ನ್ ಬಸ್ ಡಿಪೋ ಹತ್ತಿರ ಬಂದು ಪಡೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಆರು ತಿಂಗಳ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂರು ಪತ್ರಗಳನ್ನು ನೀಡಿದ್ದಾರೆ. ವಿಶೇಷ ಅನುದಾನ ಬಿಡುಗಡೆ ಮಾಡಿಸದೇ ಪ್ರತಿ ಬಾರಿ ಸಬೂಬು ಹೇಳುತ್ತಿದ್ದ ಪರಿಣಾಮ ಸೆಪ್ಟಂಬರ್ 19ರಂದು ವೆಂಕಟೇಶ್ ಅವರು ಆರ್‌ಡಿಪಿಆರ್ ಕಚೇರಿಗೆ ಹೋಗಿ ವಿಚಾರಿಸಿದಾಗ ಆರೋಪಿಗಳು ನೀಡಿರುವುದು ನಕಲಿ ಪತ್ರ ಎಂಬುದು ಗೊತ್ತಾಗಿದೆ. ಪ್ರಧಾನ ಕಾರ್ಯದರ್ಶಿ ಹೆಸರಿನಲ್ಲಿ ₹50 ಲಕ್ಷ ವಂಚನೆ ಮಾಡಿರುವ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರುದಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.