ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಕರಾವಳಿ ಜಿಲ್ಲೆಗಳಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಹಿಂದಿನಿಂದಲೂ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ’ ಎಂದು ಬರಹಗಾರ ಕೆಂಚನೂರು ಶಂಕರ್ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಕರಾವಳಿ ಕ್ರೀಡಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಕರಾವಳಿ ಪ್ರದೇಶವು ವೈವಿಧ್ಯದಿಂದ ಕೂಡಿದ್ದು, ದೇಶದಾಚೆಗೂ ಚಿರಪರಿಚಿತವಾಗಿದೆ. ಆಡಳಿತದ ಚುಕ್ಕಾಣಿ ಹಿಡಿಯುವವರು ಹಲವು ರೀತಿಯಲ್ಲಿ ಈ ಪ್ರದೇಶಕ್ಕೆ ಮನ್ನಣೆ ನೀಡಬೇಕಾದ ಅಗತ್ಯವಿದೆ. ಕರಾವಳಿಯವರು ಸಂಸ್ಕೃತಿ ಹಾಗೂ ಕ್ರೀಡಾ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ, ಈ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಯಕ್ಷಗಾನವು ಈ ಭಾಗದ ಜನಪ್ರಿಯ ಕಲೆಯಾಗಿದ್ದು, ಈ ಕಲಾ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು’ ಎಂದರು.
ತುಳು ಕೂಟದ ಅಧ್ಯಕ್ಷ ಸುಂದರ್ ರಾಜ್ ರೈ, ‘ಕರಾವಳಿ ಭಾಗವು ಕನ್ನಡ ನಾಡಿಗೆ ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಹಾಗಾಗಿ, ಕರಾವಳಿ ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡೆಗೆ ಉತ್ತೇಜನ ನೀಡಲು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅವಿಭಜಿತ ದಕ್ಷಿಣ ಕನ್ನಡದವರು ಎಲ್ಲರನ್ನೂ ಒಪ್ಪಿಕೊಂಡು ಸಾಗುವವರಾಗಿದ್ದಾರೆ’ ಎಂದು ಹೇಳಿದರು.
ದಕ್ಷಿಣ ಕನ್ನಡಿಗರ ಸಂಘದ ಅಧ್ಯಕ್ಷ ಡಾ.ಕೆ.ಸಿ.ಬಲ್ಲಾಳ್, ‘ಕರಾವಳಿಯ ಕ್ರೀಡೆ ಮತ್ತು ಸಂಸ್ಕೃತಿಯು ಜಾತಿ, ಧರ್ಮಗಳನ್ನು ಮೀರಿದೆ. ಎಲ್ಲವನ್ನೂ ಒಳಗೊಂಡಿರುವ ಕರಾವಳಿ ಪ್ರದೇಶ ತನ್ನದೆ ಆದ ವೈಶಿಷ್ಟ್ಯ ಹೊಂದಿದೆ’ ಎಂದರು.
‘ಕರ್ನಾಟಕ ರತ್ನ’ ಪ್ರಶಸ್ತಿಗೆ ಭಾಜನರಾದ ವಿಷ್ಣುವರ್ಧನ್ ಹಾಗೂ ಬಿ.ಸರೋಜಾ ದೇವಿ ಅವರಿಗೆ ಸಾಂಸ್ಕೃತಿಕ ನಮನ ಸಲ್ಲಿಸಲಾಯಿತು. ಯಕ್ಷೇಶ್ವರಿ ಯಕ್ಷಗಾನ ತಂಡದವರು ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.