ADVERTISEMENT

ರಾಜ್ಯದ ವಿವಿಧೆಡೆ ಶೀತಗಾಳಿ: ಮೈಕೊರೆಯುವ ಚಳಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 16:39 IST
Last Updated 6 ಜನವರಿ 2026, 16:39 IST
ಮಳೆ
ಮಳೆ   

ಬೆಂಗಳೂರು: ರಾಜ್ಯದ ವಿವಿಧೆಡೆ ಬೀಸುತ್ತಿರುವ ಶೀತಗಾಳಿ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ತಾಪಮಾನದಲ್ಲಿ ಕುಸಿತವಾಗುತ್ತಿದ್ದು, ಚಳಿ ಹೆಚ್ಚಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಐದು ದಿನಗಳಲ್ಲಿ ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇಲ್ಲ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. 

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗಿನ ಜಾವ ದಟ್ಟ ಮಂಜು ಕವಿಯುವ ಸಾಧ್ಯತೆ ಹೆಚ್ಚು. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಡಿಗ್ರಿ ಸೆಲ್ಸಿಯಸ್‌ ಮತ್ತು 16 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ತಾಪಮಾನ ಮತ್ತಷ್ಟು ಇಳಿಕೆ ಆಗಲಿದೆ ಎಂದು ಹೇಳಿದೆ.  

ADVERTISEMENT

ಕಳೆದ 24 ಗಂಟೆಗಳಲ್ಲಿ ಬೀದರ್, ಧಾರವಾಡ, ಗದಗದಲ್ಲಿ ಕನಿಷ್ಠ ತಾಪಮಾನ 11.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯಪುರ 12, ಹಾವೇರಿ 12.6, ಹಾಸನ 12.7, ದಾವಣಗೆರೆ 13.2, ರಾಯಚೂರು 13.6, ಬೆಳಗಾವಿ ವಿಮಾನ ನಿಲ್ದಾಣ 13.8, ಕೊಪ್ಪಳದಲ್ಲಿ 14 ಡಿಗ್ರಿ ಸೆಲ್ಸಿಯಸ್ಸ್‌ ದಾಖಲಾಗಿದೆ.  

ಕಳೆದೊಂದು ವಾರದಿಂದ ಚಳಿಯ ತೀವ್ರತೆ ಹೆಚ್ಚಾಗಿದ್ದು, ಮುಂಜಾನೆ ವಾಯುವಿಹಾರಕ್ಕೆ ಹೋಗುವವರ ಸಂಖ್ಯೆ ಕುಸಿದಿದೆ.

ಪ್ರತಿನಿತ್ಯ ಬೆಳಗಿನ ನಡಿಗೆಗಾಗಿ ಉದ್ಯಾನ, ಕ್ರೀಡಾಂಗಣದಲ್ಲಿ ಜಮಾಯಿಸುತ್ತಿದ್ದವರ ಸಂಖ್ಯೆ ಕಡಿಮೆಯಾಗಿದ್ದು, ಚಳಿಯಿಂದಾಗಿ ಜನರು ಮನೆ ಬಿಟ್ಟು ಹೊರಗೆ ಬರಲು ಹಿಂಜರಿಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.