ADVERTISEMENT

ವರ್ಗಾವಣೆ: ಪರಿಷ್ಕೃತ ನಿಯಮ ಪ್ರಕಟ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 20:51 IST
Last Updated 18 ನವೆಂಬರ್ 2020, 20:51 IST

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ ಬೋಧಕ ಸಿಬ್ಬಂದಿ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಬೋಧಕ, ಬೋಧಕೇತರ ಸಿಬ್ಬಂದಿಯ ವರ್ಗಾವಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕ ನಡೆಸಲು ಅವಕಾಶ ಕಲ್ಪಿಸುವ ಪರಿಷ್ಕೃತ ನಿಯಮಗಳ ಕರಡನ್ನು ಮಂಗಳವಾರ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಎರಡೂ ವರ್ಗಗಳಲ್ಲಿ ವಾರ್ಷಿಕ ಶೇ 12ರಷ್ಟು ಸಿಬ್ಬಂದಿಯ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಶೇ 6ರಷ್ಟು, ಪತಿ– ಪತ್ನಿ ಪ್ರಕರಣಗಳಲ್ಲಿ ಶೇ 3, ವಿಧವೆ ಅಥವಾ ತಂದೆ ಇಲ್ಲವೆ ತಾಯಿ ಒಬ್ಬರೇ ಇರುವ ಪ್ರಕರಣಗಳಲ್ಲಿ ಶೇ 1ರಷ್ಟು, ಅಂಗವಿಕಲರಿಗೆ ಶೇ 1ರಷ್ಟು ಮತ್ತು ತೀವ್ರ ಸ್ವರೂಪದ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ಶೇ 1ರಷ್ಟು ಮೀಸಲು ಕಲ್ಪಿಸಲಾಗಿದೆ. ಆನ್‌ಲೈನ್‌ ಮೂಲಕ ಸರ್ಜಿ ಅರ್ಜಿ ಸ್ವೀಕರಿಸಿ, ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುತ್ತದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರದೇಶವನ್ನು ‘ಎ’ ವಲಯ, ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಪ್ರದೇಶವನ್ನು ‘ಬಿ’ ವಲಯ, ‘ಎ’ ಮತ್ತು ‘ಬಿ’ ವಲಯದ ಹೊರತಾದ ಜಿಲ್ಲಾ ಕೇಂದ್ರಗಳನ್ನು ‘ಸಿ’ ವಲಯ ಹಾಗೂ ಎ, ಬಿ ಮತ್ತು ಸಿ ವಲಯಗಳ ಹೊರತಾದ ಪ್ರದೇಶವನ್ನು ‘ಡಿ’ ವಲಯ ಎಂದು ವರ್ಗೀಕರಿಸಲಾಗಿದೆ.

ADVERTISEMENT

‘ಬಿ’, ‘ಸಿ’ ಮತ್ತು ‘ಡಿ’ ವಲಯದ ಸಿಬ್ಬಂದಿ ಯಾವುದೇ ವಲಯದಲ್ಲಿ ಹುದ್ದೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ‘ಎ’ ವಲಯದ ಸಿಬ್ಬಂದಿ ‘ಎ’ ಹೊರತಾಗಿ ಮೂರು ವಲಯದಲ್ಲಿ ಯಾವುದೇ ಸ್ಥಳದಲ್ಲಿರುವ ಖಾಲಿ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿವೃತ್ತಿಗೆ ಎರಡು ವರ್ಷ ಬಾಕಿ ಇರುವವರು ಬಯಸಿದಲ್ಲಿ ಅವರನ್ನು ವರ್ಗಾವಣೆ ಮಾಡುವಂತಿಲ್ಲ. ಮೇ ತಿಂಗಳಿನಿಂದ ಜುಲೈ ಅಂತ್ಯದ
ಒಳಗಾಗಿ ವರ್ಗಾವಣೆ ಪ್ರಕ್ರಿಯೆ ನಡೆಸಬೇಕು. ಭ್ರಷ್ಟಾಚಾರ, ಅಕ್ರಮ, ದುರ್ನಡತೆಯ ಆರೋಪಕ್ಕೆ ಗುರಿಯಾದ ನೌಕರರನ್ನು ಯಾವುದೇ ಕಾಲದಲ್ಲಿ, ಯಾವುದೇ ವಲಯಕ್ಕೆ ವರ್ಗಾವಣೆ ಮಾಡಬಹುದು ಎಂಬ ಅಂಶ ಕರಡಿನಲ್ಲಿದೆ.

ಕರಡು ನಿಯಮಗಳ ಕುರಿತು ಯಾವುದೇ ಆಕ್ಷೇಪಣೆ ಇದ್ದಲ್ಲಿ ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, ಎಂ.ಎಸ್‌. ಬಿಲ್ಡಿಂಗ್‌, ಬೆಂಗಳೂರು–560001 ಈ ವಿಳಾಸಕ್ಕೆಹದಿನೈದು ದಿನಗಳೊಳಗೆ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.