ADVERTISEMENT

‘ಆಯುಕ್ತರ’ ಮುಸುಕಿನ ಗುದ್ದಾಟ

ಮುಖ್ಯ ಆಯುಕ್ತರೇ ‘ಮಾಹಿತಿ’ ಮುಚ್ಚಿಟ್ಟಿದ್ದಕ್ಕೆ ಅಸಮಾಧಾನ

ವಿಜಯಕುಮಾರ್ ಎಸ್.ಕೆ.
Published 10 ಅಕ್ಟೋಬರ್ 2019, 19:45 IST
Last Updated 10 ಅಕ್ಟೋಬರ್ 2019, 19:45 IST
ಮಾಹಿತಿಸೌಧ
ಮಾಹಿತಿಸೌಧ   

ಬೆಂಗಳೂರು: ಕರ್ನಾಟಕ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರು ಮತ್ತು ಇತರ ಮಾಹಿತಿ ಆಯುಕ್ತರ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

ಕೇಂದ್ರ ಮಾಹಿತಿ ಆಯೋಗವು ನವದೆಹಲಿಯ ವಿಜ್ಞಾನ ಭವನದಲ್ಲಿ ಮಾಹಿತಿ ಆಯುಕ್ತರುಗಳ 14ನೇ ರಾಷ್ಟ್ರೀಯ ಸಮ್ಮೇಳನವನ್ನು ಇದೇ 12ರಂದು ಆಯೋಜಿಸಿದೆ. ಈ ಬಗ್ಗೆ ಮುಖ್ಯ ಆಯುಕ್ತರು ಮಾಹಿತಿ ನೀಡದಿರುವ ಬಗ್ಗೆ ಇತರ ಆಯುಕ್ತರುಗಳು ಅಸಮಾಧಾನ ಹೊರಹಾಕಿದ್ದಾರೆ. ಇದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಸಮ್ಮೇಳನದ ಸಂಬಂಧ ಎನ್.ಜಿ. ಶ್ರೀನಿವಾಸ್ ಅವರಿಗೆ ಸೆ.20ರಂದು ಪತ್ರ ಬರೆದಿದ್ದಕೇಂದ್ರ ಮಾಹಿತಿ ಆಯೋಗದ ಮುಖ್ಯ ಆಯುಕ್ತ ಸುಧೀರ್ ಭಾರ್ಗವ, ‘ರಾಜ್ಯದ ಎಲ್ಲಾ ಮಾಹಿತಿ ಆಯುಕ್ತರು ಮತ್ತು ಕಾರ್ಯದರ್ಶಿಯವರೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸಿ’ ಎಂದು ಕೋರಿದ್ದರು.

ADVERTISEMENT

ಆಸಕ್ತ ನಿವೃತ್ತ ಮಾಹಿತಿ ಆಯುಕ್ತರು ಮತ್ತು ಭಾಗವಹಿಸಲು ಇಚ್ಛಿಸುವ ಇತರೇ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳ ಹೆಸರನ್ನೂ ಸೂಚಿಸಿ, ಸೆ.30ರೊಳಗೆ ಪ್ರತಿಕ್ರಿಯೆ ಕಳುಹಿಸುವಂತೆಯೂ ಪತ್ರದಲ್ಲಿ ತಿಳಿಸಿದ್ದರು.

ಆದರೆ, ರಾಜ್ಯ ಮಾಹಿತಿ ಆಯೋಗದ ಇತರ ಒಂಬತ್ತು ಮಾಹಿತಿ ಆಯುಕ್ತರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ. ‘ಸಮ್ಮೇಳನ ನಡೆಯುತ್ತಿದೆ ಎಂಬುದು ಗೊತ್ತು. ಆದರೆ, ಈ ಬಗ್ಗೆ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ನಮಗೆ ಅಧಿಕೃತ ಮಾಹಿತಿಯನ್ನೇ ನೀಡಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಆಯುಕ್ತರೊಬ್ಬರು ‘ಪ್ರಜಾವಾಣಿ’ ಬಳಿ ಬೇಸರ ತೋಡಿಕೊಂಡರು.

‘ನಾನು ಮುಖ್ಯ ಆಯುಕ್ತ, ಉಳಿದ ವರೆಲ್ಲರೂ ನನ್ನ ಅಧೀನದಲ್ಲಿರಬೇಕು ಎಂಬ ಮನೋಭಾವ ಅವರಲ್ಲಿ ಇದ್ದಂತಿದೆ. ಕಾಯ್ದೆಗಳ ಪ್ರಕಾರ ಎಲ್ಲರೂ ಮಾಹಿತಿ ಆಯುಕ್ತರೇ. ನಮ್ಮಲ್ಲೇ ಈ ರೀತಿಯ ತಾರತಮ್ಯ ಇದ್ದರೆ ಹೇಗೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇನ್ನೊಬ್ಬ ಆಯುಕ್ತರು ಪ್ರಶ್ನಿಸಿದರು.

ಈ ಬೆಳವಣಿಗೆ ಬಗ್ಗೆ ಎನ್‌.ಜಿ. ಶ್ರೀನಿವಾಸ್ ಅವರ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರಯತ್ನಿಸಿತು. ಕರೆ ಸ್ವೀಕರಿಸಿದ ಅವರು, ವಿಷಯ ಪ್ರಸ್ತಾಪಿಸಿದ ಕೂಡಲೇ ಕರೆ ಸ್ಥಗಿತಗೊಳಿಸಿದರು. ಮತ್ತೆ ಹಲವು ಬಾರಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.

‘ಮೇಲರಿಮೆ ಕಾರಣ ಇರಬಹುದು’

‘ಮಾಹಿತಿ ಆಯುಕ್ತ ಎಂದರೆ ನಾನೊಬ್ಬನೇ ಎಂಬ ಭಾವನೆ ಅವರಲ್ಲಿ ಇರಬಹುದು. ಹೀಗಾಗಿ ಉಳಿದವರನ್ನೆಲ್ಲಾ ನಿರ್ಲಕ್ಷ್ಯ ಮಾಡಿದಿದ್ದಾರೆ’ ಎಂದು ಮಾಹಿತಿ ಆಯುಕ್ತ ಎಲ್. ಕೃಷ್ಣಮೂರ್ತಿ ಪ್ರತಿಕ್ರಿಯಿಸಿದರು.

‘14 ವರ್ಷಗಳಿಂದ ನಡೆಯು
ತ್ತಿರುವ ಸಮ್ಮೇಳನಕ್ಕೆ ರಾಜ್ಯದಲ್ಲಿ ಮುಖ್ಯ ಆಯುಕ್ತರಾದವರು ಉಳಿದೆಲ್ಲಾ ಆಯುಕ್ತರನ್ನು ಕರೆದೊಯ್ಯುತ್ತಿದ್ದರು. ನಾನು ಕೂಡ ಈ ಹಿಂದೆ ಮುಖ್ಯ ಆಯುಕ್ತರ ಹುದ್ದೆ ನಿರ್ವಹಿಸಿದ್ದೇನೆ. ಎರಡು ಸಮ್ಮೇಳನಗಳಿಗೆ ಎಲ್ಲಾ ಮಾಹಿತಿ ಆಯುಕ್ತರನ್ನೂ ಕರೆದೊಯ್ದಿದ್ದೆ’ ಎಂದರು.

‘ಸಮ್ಮೇಳನದಲ್ಲಿ ಹಲವು ತಜ್ಞರು ವಿಷಯ ಮಂಡಿಸುತ್ತಾರೆ. ಭಾಗವಹಿಸಿದರೆ ನಮ್ಮ ಜ್ಞಾನ ಇನ್ನಷ್ಟು ವಿಸ್ತಾರಗೊಳ್ಳುತ್ತದೆ. ಯಾವ ಕಾರಣಕ್ಕೆ ಸಮ್ಮೇಳನದ ವಿಷಯವನ್ನು ಮುಖ್ಯ ಆಯುಕ್ತರು ಮುಚ್ಚಿಟ್ಟಿದ್ದಾರೆಯೋ ಗೊತ್ತಿಲ್ಲ. ಆಯೋಗದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.