ADVERTISEMENT

ಕಿದ್ವಾಯಿ: ಅಕ್ರಮ ತನಿಖೆಗೆ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2023, 16:32 IST
Last Updated 20 ಸೆಪ್ಟೆಂಬರ್ 2023, 16:32 IST
 ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
 ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ   

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಟೆಂಡರ್ ಸೇರಿ ವಿವಿಧ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ, ತನಿಖಾ ವರದಿಯನ್ನು 15 ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದೆ. 

ಸಂಸ್ಥೆಯು ಪೆಟ್‌ ಸ್ಕ್ಯಾನ್‌ ಟೆಂಡರ್‌ ಅನ್ನು ಬೆಂಗಳೂರು ಮೆಡಿಕಲ್ ಸಿಸ್ಟಮ್ಸ್‌ (ಬಿಎಂಎಸ್) ಸಂಸ್ಥೆಗೆ ಕಾರ್ಯಾದೇಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಅಧಿಕಾರಕ್ಕೆ ಮುನ್ನವೇ ಕಾರ್ಯಾದೇಶ!’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ ಆ.17ರಂದು ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಸಂಸ್ಥೆಯಲ್ಲಿನ ವೈದ್ಯರು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನಾಲ್ಕು ಪುಟಗಳ ವರದಿ ಸಹಿತ ದೂರು ನೀಡಿ, ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಇದರಿಂದಾಗಿ ಸೂಕ್ತ ತನಿಖೆ ನಡೆಸಿ, ವರದಿ ನೀಡುವಂತೆ ಮುಖ್ಯಮಂತ್ರಿ ಆದೇಶಿಸಿದ್ದರು. 

ಈಗ ಖಜಾನೆ ಇಲಾಖೆ ಆಯುಕ್ತೆ ಅರುಂಧತಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಹಕಾರ ಸಂಘಗಳ ಅಪರ ನಿಬಂಧಕ ಗುರುಸ್ವಾಮಿ ಮತ್ತು ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಆಯುಕ್ತ ಮಹದೇವ್ ಅವರು ಸಮಿತಿಯ ಸದಸ್ಯರಾಗಿದ್ದಾರೆ. 

ADVERTISEMENT

ಸಂಸ್ಥೆಯಲ್ಲಿ ಒದಗಿಸುತ್ತಿರುವ ಸೇವೆಗಳಿಗೆ ರೋಗಿಗಳಿಂದ ಹಚ್ಚಿನ ಶುಲ್ಕವನ್ನು ಪಡೆಯುತ್ತಿರುವುದು, ಅನುದಾನದ ದುರ್ಬಳಕೆ, ಭ್ರಷ್ಟಾಚಾರ, ಸಂಸ್ಥೆಯ ಸಿಬ್ಬಂದಿ ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಂಸ್ಥೆಗೆ ಆರ್ಥಿಕ ನಷ್ಟ ಉಂಟು ಮಾಡುತ್ತಿರುವುದು, ರೋಗಿಗಳಿಗೆ ಕಳಪೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು, ಔಷಧಗಳ ಕೊರತೆ, ನಿಗದಿತ ಸಂಸ್ಥೆಗೆ ಹೆಚ್ಚಿನ ಲಾಭ ಬರುವಂತೆ ಟೆಂಡರ್ ನೀಡಿರುವುದು ಹಾಗೂ ಔಷಧಗಳ ಖರೀದಿಯಲ್ಲಿ ಪಾರದರ್ಶಕತೆ ಇಲ್ಲದಿರುವುದರ ಬಗ್ಗೆ ದೂರುಗಳು ಬಂದಿವೆ ಎಂದು ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ. 

ಸಂಸ್ಥೆಯಲ್ಲಿ ಒದಗಿಸಲಾಗುತ್ತಿರುವ ಪೆಟ್ ಸ್ಕ್ಯಾನ್ ಸೇವೆಗೆ ಸಂಬಂಧಿಸಿದ ಟೆಂಡರ್ ಪಾರದರ್ಶಕವಾಗಿ ನಡೆಯದೇ ಇರುವ ಬಗ್ಗೆ ಹಾಗೂ ಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಕಸಿ ಚಿಕಿತ್ಸೆಯ ಅವ್ಯವಸ್ಥೆಯ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ, ಈ ಎಲ್ಲಾ ದೂರುಗಳ ಬಗ್ಗೆ ಪರಿಶೀಲಿಸಿ, ವರದಿಯನ್ನು ನೀಡಬೇಕು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.