ಬೆಂಗಳೂರು: ‘ನಮ್ಮ ಮೆಟ್ರೊ’ನ ಎಲ್ಲ ನಿಲ್ದಾಣಗಳಲ್ಲಿ ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಆಗಸ್ಟ್ 21ರಿಂದ ಪ್ರಯಾಣಿಕರಿಗೆ ಲಭ್ಯವಿರುತ್ತವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಪ್ರಯಾಣಿಕರು ತಮ್ಮ ವಿವರಗಳನ್ನು ವೆಬ್‌ಸೈಟ್: ‘NAMMAMETRO.AGSINDIA.COM’ ಅಥವಾ ‘BMRCL RBL bank NCMC’ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಸ್ವಯಂ ನೋಂದಣಿ ಮಾಡಿಕೊಂಡು, ನೋಂದಣಿ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಟಿಕೆಟ್ ಕೌಂಟರ್ ನಿರ್ವಾಹಕರಿಗೆ ತಿಳಿಸಬೇಕು. ಕಾರ್ಡ್‌ನ ಮಾರಾಟ ಬೆಲೆ ₹ 50 ಇರಲಿದೆ. ಸ್ಮಾರ್ಟ್ ಕಾರ್ಡ್‌ಗಳಲ್ಲಿ ಲಭ್ಯವಿರುವ ಶೇ 5ರಷ್ಟು ರಿಯಾಯಿತಿ ಎನ್‌ಸಿಎಂಸಿ ಕಾರ್ಡ್‌ಗಳಿಗೂ ಅನ್ವಯಿಸುತ್ತದೆ. ಈ ಕಾರ್ಡ್ ಎಲ್ಲ ಆರ್‌ಬಿಎಲ್ ಬ್ಯಾಂಕ್ ಶಾಖೆಗಳಲ್ಲೂ ಲಭ್ಯ ಇರುತ್ತದೆ ಎಂದು ತಿಳಿಸಿದೆ.
ಪ್ರಸ್ತುತ ಬಳಕೆಯಲ್ಲಿ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳನ್ನು (ಸಿಎಸ್‌ಸಿ) ನಮ್ಮ ಮೆಟ್ರೊ ಪ್ರಯಾಣದಲ್ಲಿ ಮಾತ್ರ ಬಳಸಬಹುದಾಗಿದೆ. ‘ಒಂದು ದೇಶ ಒಂದು ಕಾರ್ಡ್‘ ಯೋಜನೆಯಂತೆ ಈ ಕಾರ್ಡ್ ಪರಿಚಯಿಸಲಾಗುತ್ತಿದೆ. ಈ ಕಾರ್ಡ್‌ಗಳನ್ನು ದೇಶದ ಎಲ್ಲ ಸಾರಿಗೆ ವ್ಯವಸ್ಥೆ, ರಿಟೇಲ್ ಅಂಗಡಿ, ಪೆಟ್ರೊಲ್ ಬಂಕ್, ಶಾಪಿಂಗ್‌ಗಳಲ್ಲಿ ಬಳಸಬಹುದಾಗಿದೆ.
ಪ್ರಯಾಣಕ್ಕೆ ಹಾಗೂ ಶಾಪಿಂಗ್‌ಗೆ ಬೇಕಾಗಿರುವ ವಿವಿಧ ಕಾರ್ಡ್‌ಗಳ ಅಗತ್ಯಗಳನ್ನು ಕಡಿಮೆ ಮಾಡಲು ಸಿಎಸ್‌ಸಿ ಕಾರ್ಡ್‌ಗಳನ್ನು ಹಂತ ಹಂತವಾಗಿ ತೆಗೆದು ಹಾಕಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ರುಪೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಮೆಟ್ರೊ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸಮಯದಲ್ಲಿ ಮಾರಾಟಕ್ಕೆ ಲಭ್ಯವಿರುತ್ತವೆ. ಸಿಎಸ್‌ಸಿಗಳು ಬೆಳಿಗ್ಗೆ 8ರಿಂದ ಬೆಳಿಗ್ಗೆ 11 ಹಾಗೂ ಸಂಜೆ 5ರಿಂದ ರಾತ್ರಿ 8 ರವರೆಗೆ ಮಾತ್ರ ಮಾರಾಟಕ್ಕೆ ಲಭ್ಯವಿರುತ್ತವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.