ADVERTISEMENT

ಅಧಿಕ ಲಾಭದ ಆಮಿಷವೊಡ್ಡಿ ₹13.52 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 19:13 IST
Last Updated 1 ಫೆಬ್ರುವರಿ 2020, 19:13 IST

ಬೆಂಗಳೂರು: ‘ಅಧಿಕ ಲಾಭದ ಆಮಿಷವೊಡ್ಡಿದ್ದ ಸಂಬಂಧಿ ಅರುಣಾ ಹಾಗೂ ಅವರ ‍ಪತಿ ಜಯಂತ್ ಯಾದವ್ ₹ 13.52 ಕೋಟಿ ವಂಚನೆ ಮಾಡಿದ್ದಾರೆ’ ಎಂದು ಆರೋಪಿಸಿ ವೆಂಕಟರಾಧಾ ಎಂಬುವರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದಾರೆ.

‘2016ರ ಮೇನಲ್ಲಿ ಹೂಡಿಕೆ ವ್ಯವಹಾರ ಮಾಡೋಣವೆಂದು ಅರುಣಾ ಹಾಗೂ ಜಯಂತ್ ಹೇಳಿದ್ದರು. ಅದನ್ನು ನಂಬಿ ಹಣ ಹೂಡಿದ್ದೆವು. ಅದನ್ನು ಡಿ.ಜೆ.ಇನ್ವೆಸ್ಟ್‌ಮೆಂಟ್ ಕಂಪನಿಯಲ್ಲಿ ಹೂಡಿಕೆ ಮಾಡಿರುವುದಾಗಿ ಹೇಳಿದ್ದ ಆರೋಪಿಗಳು, ಕೆಲ ದಿನ ಬಿಟ್ಟು ಕಂಪನಿಯಿಂದ ಬರಬೇಕಾದ ಹಣ ಬಂದಿಲ್ಲವೆಂದು ವಾದಿಸಿದ್ದರು’ ಎಂದು ದೂರಿನಲ್ಲಿ ವೆಂಕಟರಾಧಾ ಹೇಳಿದ್ದಾರೆ.

‘ಹಳೇ ಕಂಪನಿಯ ಬದಲು ಹೊಸದಾಗಿ ‘ವಿ.ಸಿ. ಇನ್ವೆಸ್ಟ್‌ಮೆಂಟ್ ಅಂಡ್ ಮ್ಯಾನೇಜ್‌ಮೆಂಟ್’ ಕಂಪನಿ ಸ್ಥಾಪಿಸಿರುವುದಾಗಿ ಹೇಳಿದ್ದ ಆರೋಪಿಗಳು ಪುನಃ ಹಣ ಪಡೆದಿದ್ದರು. ನಗರದ ಬೇರೆ ಬೇರೆ ಪ್ರದೇಶಗಳ ಬ್ಯಾಂಕ್‌ ಶಾಖೆಗಳಲ್ಲಿ ಖಾತೆ ತೆರೆಸಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ಪತಿಯ ಹೆಸರಿನಲ್ಲಿ ನಕಲಿ ಕಾರ್ಡ್‌ ಸೃಷ್ಟಿಸಿರುವ ಆರೋಪಿಗಳು, ಅವರ ನಕಲಿ ಸಹಿ ಬಳಸಿಕೊಂಡು ನಮ್ಮ ವಾಹನವನ್ನೂ ಬೇರೆಯವರಿಗೆ ಮಾರಿದ್ದಾರೆ’ ಎಂದೂ ಆರೋಪಿಸಿದ್ದಾರೆ.

ADVERTISEMENT

ಬಾಣಸವಾಡಿ ಪೊಲೀಸರು, ‘ದೂರಿನಲ್ಲಿ ಕೆಲ ಗೊಂದಲಗಳು ಇವೆ. ಸದ್ಯ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ವಂಚನೆ ಸಂಬಂಧ ದಾಖಲೆಗಳನ್ನು ತಂದುಕೊಡುವಂತೆ ಹೇಳಿದ್ದೇವೆ. ಅವು ಕೈಗೆ ಸಿಕ್ಕ ನಂತರವೇ ನಿಖರ ಮಾಹಿತಿ ತಿಳಿಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.