ADVERTISEMENT

ಸಹಕಾರ ಕ್ಷೇತ್ರದಲ್ಲಿ ದೂರುಗಳು ಹೆಚ್ಚುತ್ತಿವೆ: ಸಚಿವ ಎಚ್‌.ಕೆ.ಪಾಟೀಲ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಚಿವ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 17:15 IST
Last Updated 23 ಆಗಸ್ಟ್ 2024, 17:15 IST
<div class="paragraphs"><p>ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ, ಕಾನೂನು ಸಚಿವ ಎಚ್.ಕೆ. ಪಾಟೀಲ ಪಾಲ್ಗೊಂಡಿದ್ದರು </p></div>

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ವಿಷ್ಣುಕಾಂತ ಚಟಪಲ್ಲಿ, ಕಾನೂನು ಸಚಿವ ಎಚ್.ಕೆ. ಪಾಟೀಲ ಪಾಲ್ಗೊಂಡಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಹಕಾರಿ ಸಂಸ್ಥೆಗಳಲ್ಲಿ ಅಕ್ರಮ, ಕಾನೂನು ಉಲ್ಲಂಘನೆಯ ಆರೋಪದ ದೂರುಗಳು ಹೆಚ್ಚುತ್ತಿವೆ. ಸಹಕಾರ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಿದ್ದು ತಪ್ಪಾಯಿತು ಎಂಬ ಭಾವನೆ ಮೂಡುತ್ತಿದೆ’ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ADVERTISEMENT

ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಹಾಗೂ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಹಕಾರಿ ಸಂಸ್ಥೆಗಳ ನೇಮಕಾತಿಯಲ್ಲಿ ಪಾರ್ದರ್ಶಕತೆ ಇಲ್ಲದಿರುವುದು, ಬಡ್ಡಿ ಪ್ರಮಾಣ ಹೆಚ್ಚಳ ಸೇರಿದಂತೆ ಹಲವು ದೂರುಗಳು ಬಂದಿವೆ. ಸಹಕಾರ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗದಿದ್ದರೆ ಸಂಸ್ಥೆಗಳು ಉಳಿಯುವುದಿಲ್ಲ’ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಿದೆ. ಸಾಕಷ್ಟು ಸವಾಲುಗಳು ಮುಂದಿವೆ. ಮುಂದಿನ ವರ್ಷ ಸಹಕಾರಿ ಕ್ಷೇತ್ರಕ್ಕೆ 120 ವರ್ಷ ತುಂಬಲಿದೆ. ಸಂಸ್ಥೆಯ ನಿರ್ದೇಶಕ ಅಥವಾ ಅಧ್ಯಕ್ಷನಾದರೆ ಮಾತ್ರ ನೈಜ ಸಹಕಾರಿಯಲ್ಲ. ಸಹಕಾರಿ ಸಂಸ್ಥೆ ಕಟ್ಟುವವನು ನೈಜ ಸಹಕಾರಿ ಎಂದು ತಿಳಿಸಿದರು.

ರಾಜ್ಯದಲ್ಲಿ ಆರು ಸಾವಿರಕ್ಕೂ ಅಧಿಕ ಸೌಹಾರ್ದ ಸಹಕಾರಿ ಸಂಸ್ಥೆಗಳಿದ್ದು, ₹ 50 ಸಾವಿರ ಕೋಟಿ ವಹಿವಾಟು ನಡೆಸುತ್ತಿವೆ. ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲಾಗುತ್ತದೆಯೇ ಎಂಬುದರ ಬಗ್ಗೆ ಸಂಸ್ಥೆಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. 

ಚಾಣಕ್ಯ ವಿಶ್ವವಿದ್ಯಾಲಯದ ಕುಲಪತಿ ಯಶವಂತ ಡೋಂಗ್ರೆ ಅವರ ‘ಅಟಾನಮಿ, ಗವರ್ನೆನ್ಸ್‌ ಆ್ಯಂಡ್‌ ಎಂಪವರ್‌ಮೆಂಟ್‌:  ಸ್ಟಡಿ ಆಫ್‌ ಸೌಹಾರ್ದ ಕೋಆಪರೇಟಿವ್ಸ್‌’ ಮತ್ತು ಸಿ.ಎನ್.ಪರಶಿವಮೂರ್ತಿ ಅವರ ‘ಸೌಹಾರ್ದ ಸಹಕಾರಿ ಕಾಯಿದೆ ಆಡಳಿತ ಕೈಪಿಡಿ‘ ಹಾಗೂ ಶಶಿಧರ ಎಲೆ ಅವರ ‘ಸಹಕಾರ ಅವಲೋಕನ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಸಹಕಾರ ಹಾಗೂ ಬ್ಯಾಂಕಿಂಗ್‌ ಮ್ಯಾನೇಜ್‌ಮೆಂಟ್ ಡಿಪ್ಲೊಮಾ ಕಾರ್ಯಕ್ರಮದ ಮೊದಲನೇ ತಂಡದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. 

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕುಲಪತಿ ಸುರೇಶ್ ವಿ ನಾಡಗೌಡರ, ವಿಶ್ರಾಂತ ಕುಲಪತಿ ವಿಷ್ಣುಕಾಂತ ಚಟಪಲ್ಲಿ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಅಧ್ಯಕ್ಷ ಜಿ.ನಂಜನಗೌಡ, ಉಪಾಧ್ಯಕ್ಷ ಎ.ಆರ್.ಪ್ರಸನ್ನ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.