ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಖರೀದಿ ಪ್ರಕ್ರಿಯೆಯಲ್ಲಿ ಲೋಪಗಳಾಗಿರುವ ವರದಿ ಬಂದಿದೆ. ಇನ್ನು ಮುಂದೆ ಯಾವುದೇ ಖರೀದಿ ಪ್ರಕ್ರಿಯೆ ನಡೆಸಬೇಕಿದ್ದರೂ ಕೆಟಿಪಿಪಿ (ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆ) ಕಾಯ್ದೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಈ ಸಂಬಂಧ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಿಗೆ ಮುಖ್ಯ ಜಾಗೃತಾಧಿಕಾರಿ ಭೇಟಿ ನೀಡಿದಾಗ ಲೋಪಗಳು ಕಂಡು ಬಂದಿದ್ದವು. ಬಹುತೇಕ ಆಸ್ಪತ್ರೆಗಳಲ್ಲಿ ವಾರ್ಷಿಕವಾಗಿ ಅವಶ್ಯವಿರುವ ಔಷಧ ಮತ್ತು ಸಾಮಗ್ರಿ ಖರೀದಿಸುವಾಗ ಮಾರುಕಟ್ಟೆ ದರಕ್ಕಿಂತ ಹೆಚ್ಚು ಪಾವತಿ ಮಾಡಿ ಇಲಾಖೆಗೆ ಆರ್ಥಿಕ ಹೊರೆಯನ್ನು ಉಂಟು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಾನುದಾನ, ಎಬಿಎಆರ್‌ಕೆ ಅನುದಾನ, ಎನ್‌ಎಚ್‌ಎಂ ಅನುದಾನ, ಕೇಂದ್ರ ಅನುದಾನ ಸೇರಿ ಯಾವುದೇ ಅನುದಾನದಲ್ಲಿ ಖರೀದಿ ಪ್ರಕ್ರಿಯೆ ನಡೆಸುವಾಗ ನಿಯಮ ಪಾಲನೆ ಮಾಡಬೇಕು. ಎಲ್ಲ ತರಹದ ಸೇವೆ ಮತ್ತು ವಸ್ತು ಸಂಗ್ರಹಣೆಯನ್ನು ಇ–ಸಂಗ್ರಹಣೆ ಅತವಾ ಜೆಮ್ ಪೋರ್ಟಲ್ ಮೂಲಕ ಮಾಡಬೇಕು. ಔಷಧ, ರಾಸಾಯನಿಕ, ಯಂತ್ರೋಪಕರಣ, ಸಲಕರಣೆಗಳ ಬಗ್ಗೆ ವಾರ್ಷಿಕ ಬೇಡಿಕೆ ಪಟ್ಟಿ ತಯಾರಿಸಿ ಇ–ಪ್ರೊಕ್ಯೂರ್‌ಮೆಂಟ್ ಮಾಡಲು ಕ್ರಮ ವಹಿಸಬೇಕು. ತುರ್ತು ಸಂದರ್ಭದಲ್ಲಿ ಮಾತ್ರ ಮಿತಿಯೊಳಗೆ ಅವಶ್ಯಕ್ಕೆ ಅನುಗುಣವಾಗಿ ಔಷಧ, ಸಾಮಗ್ರಿ ಖರೀದಿ ಮಾಡಬಹುದು ಎಂದು ಆಯುಕ್ತರು ಸೂಚಿಸಿದ್ದಾರೆ.
ಕೆಟಿಪಿಪಿ ನಿಯಮ ಪಾಲಿಸದಿದ್ದರೆ, ಆರ್ಥಿಕ ಶಿಸ್ತು ಉಲ್ಲಂಘಿಸಿದರೆ ನಿಯಮ ಬಾಹಿರ ಸಂಗ್ರಹಣೆ ಎಂದು ಪರಿಗಣಿಸಿ ಆರೋಪಿ ಅಧಿಕಾರಿ, ಸಿಬ್ಬಂದಿಯೇ ನಷ್ಟದ ವೆಚ್ಚವನ್ನು ಭರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.