ADVERTISEMENT

1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 19:41 IST
Last Updated 25 ನವೆಂಬರ್ 2025, 19:41 IST
ಕಾರ್ಯಕ್ರಮದಲ್ಲಿ ಶುಭಾಂಶು ಶುಕ್ಲಾ ಅವರನ್ನು ಗೌರವಿಸಲಾಯಿತು. ಮಂಜುಳಾ ಎನ್., ಎನ್.ಎಸ್. ಬೋಸರಾಜು, ಮಧು ಬಂಗಾರಪ್ಪ, ಸದಾಶಿವ ಪ್ರಭು ಬಿ. ಹಾಗೂ ಬಿ.ಆರ್. ಗುರುಪ್ರಸಾದ್ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಶುಭಾಂಶು ಶುಕ್ಲಾ ಅವರನ್ನು ಗೌರವಿಸಲಾಯಿತು. ಮಂಜುಳಾ ಎನ್., ಎನ್.ಎಸ್. ಬೋಸರಾಜು, ಮಧು ಬಂಗಾರಪ್ಪ, ಸದಾಶಿವ ಪ್ರಭು ಬಿ. ಹಾಗೂ ಬಿ.ಆರ್. ಗುರುಪ್ರಸಾದ್ ಉಪಸ್ಥಿತರಿದ್ದರು   

ಬೆಂಗಳೂರು: ‘ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸದೃಢಗೊಳಿಸಲು 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಆರಂಭಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಗಗನಯಾತ್ರಿ ಶುಭಾಂಶು ಶುಕ್ಲಾ ಅವರೊಂದಿಗೆ ವಿದ್ಯಾರ್ಥಿ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಯುಗವು ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಂಪ್ಯೂಟರ್‌ಗಳ ಯುಗವಾಗಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಶಾಲಾ ಮಕ್ಕಳು ಹಿಂದೆ ಉಳಿಯಬಾರದು. ಆದ್ದರಿಂದ ಸರ್ಕಾರವು 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಆರಂಭಿಸುವ ನಿರ್ಧಾರಕ್ಕೆ ಬಂದಿದೆ’ ಎಂದರು.

‘900 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಕ 11 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲು ಸಿದ್ಧತೆ ನಡೆಸಿದ್ದೇವೆ. ಶುಭಾಂಶು ಶುಕ್ಲಾ ಅವರಂತಹ ಸಾಧಕರ ಕನಸುಗಳನ್ನು ನಮ್ಮ ಮಕ್ಕಳು ಮುಂದುವರಿಸಬೇಕಾದರೆ, ಅವರಿಗೆ ಬಾಲ್ಯದಿಂದಲೇ ಭದ್ರ ಬುನಾದಿ ಹಾಕುವುದು ನನ್ನ ಕರ್ತವ್ಯ’ ಎಂದು ಹೇಳಿದರು.

ADVERTISEMENT

‘ಸುಮಾರು 40 ವರ್ಷಗಳ ಹಿಂದೆ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹೋದಾಗ ನಮಗೆ ಉಂಟಾದ ರೋಮಾಂಚನವನ್ನು ಶುಕ್ಲಾ ಅವರು ಮತ್ತೆ ನೆನಪಿಸುತ್ತಿದ್ದಾರೆ. ಅಂದು ನಮ್ಮ ದೇಶದ ಜನಸಂಖ್ಯೆ 100 ಕೋಟಿಗಿಂತ ಕಡಿಮೆಯಿತ್ತು. ಇಂದು 140 ಕೋಟಿ ಜನರ ಕನಸನ್ನು ಶುಕ್ಲಾ ಅವರು ಹೊತ್ತು ಸಾಗುತ್ತಿದ್ದಾರೆ. ಲಖನೌದಲ್ಲಿ ಕಷ್ಟಪಟ್ಟು ಓದಿ, ಇಂದು ಈ ಸ್ಥಾನಕ್ಕೆ ಏರಿರುವ ಅವರ ಸಾಧನೆ ಮಕ್ಕಳಿಗೆ ಮಾದರಿಯಾಗಬೇಕು’ ಎಂದು ಸಚಿವರು ಬಣ್ಣಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬಾಹ್ಯಾಕಾಶ, ವಿಜ್ಞಾನ ಮತ್ತು ಗಗನಯಾನದ ಕುರಿತು ವಿದ್ಯಾರ್ಥಿಗಳು ಕೇಳಿದ ಕುತೂಹಲಕಾರಿ ಪ್ರಶ್ನೆಗಳಿಗೆ ಶುಕ್ಲಾ ಅವರು ಉತ್ತರಿಸಿದರು.

ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಐಟಿ-ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಮಂಜುಳಾ ಎನ್., ನಿರ್ದೇಶಕ ಸದಾಶಿವ ಪ್ರಭು ಬಿ. ಹಾಗೂ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.