ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಆಶಾ ಮಾರ್ಗದರ್ಶಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರುವ ಆರೋಗ್ಯ ಇಲಾಖೆಯ ಕ್ರಮವನ್ನು ಖಂಡಿಸಿರುವ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ, ಇಲಾಖೆಯು ಆದೇಶ ಹಿಂಪಡೆಯದಿದ್ದರೆ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 195 ಆಶಾ ಮಾರ್ಗದರ್ಶಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆರೋಗ್ಯ ಇಲಾಖೆ ಇದೇ 12ರಂದು ಆದೇಶ ಹೊರಡಿಸಿದೆ.
‘ಕಳೆದ 15-18 ವರ್ಷಗಳಿಂದ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಏಕಾಏಕಿ ಬೀದಿಗೆ ತಳ್ಳಿದರೆ ಅವರ ಭವಿಷ್ಯ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಸಿಬ್ಬಂದಿ ಈಗಾಗಲೇ ತಮ್ಮ ಮಕ್ಕಳನ್ನು ಶಾಲಾ–ಕಾಲೇಜುಗಳಿಗೆ ಸೇರಿಸಿದ್ದು, ಇಲಾಖೆಯ ಕ್ರಮದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಕರ್ತವ್ಯದಿಂದ ಬಿಡುಗಡೆಗೊಂಡಿರುವ 195 ಮಂದಿಯನ್ನು ಅರ್ಹತೆಯ ಆಧಾರ ಆಯಾ ಜಿಲ್ಲೆಗಳಲ್ಲಿ, ಎನ್‌ಎಚ್‌ಎಂ ಅಡಿ ಖಾಲಿ ಇರುವ ಶುಶ್ರೂಷಕರ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಿಸುವುದು ಅವೈಜ್ಞಾನಿಕ ಆದೇಶ. ಹುದ್ದೆಯಿಂದ ಬಿಡುಗಡೆಗೊಂಡವರ ಕಣ್ಣೀರ ಶಾಪಕ್ಕೆ ಗುರಿಯಾಗುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ಆದೇಶವನ್ನು ಕೈಬಿಡಬೇಕು’ ಎಂದು ಸಂಘದ ರಾಜ್ಯಾಧ್ಯಕ್ಷ ಶ್ರೀಕಾಂತಸ್ವಾಮಿ ಆಗ್ರಹಿಸಿದ್ದಾರೆ.
‘ಈ ಆದೇಶವನ್ನು ಸರ್ಕಾರ ಕೈಬಿಡದಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ. ಅಗತ್ಯವಿದ್ದರೆ ಬೀದಿಗೆ ಇಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸಲು ಸರ್ಕಾರವು ಈ ರೀತಿ ನಿರ್ಧಾರಗಳು ತೆಗೆದುಕೊಳ್ಳುತ್ತಿರುವುದು ಮೆಲ್ನೋಟಕ್ಕೆ ತಿಳಿಯುತ್ತದೆ. ಸಿಬ್ಬಂದಿಯ ಹೊಟ್ಟೆ ಮೇಲೆ ಹೊಡೆದು, ಸರ್ಕಾರ ನಡೆಸುವುದು ಯಾವ ನ್ಯಾಯ? ನಮಗೆ ನೀಡಿದ ಭರವಸೆಯಂತೆ ನೌಕರರನ್ನು ಕಾಯಂಗೊಳಿಸಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.