ADVERTISEMENT

ತಹಶಿಲ್ದಾರ್ ಅಜಿತ್ ಕುಮಾರ್ ಆಸ್ತಿ ಮುಟ್ಟುಗೋಲಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 22:30 IST
Last Updated 21 ಜುಲೈ 2023, 22:30 IST
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಕಾರ್ಯಕರ್ತರು ಕೆ.ಆರ್. ಪುರದ ತಾಲ್ಲೂಕು ಕಚೇರಿ ಎದುರಿನ ಅಂಬೇಡ್ಕರ್ ಪುತ್ಥಳಿ ಎದುರು ಧರಣಿ ನಡೆಸಿದರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದ ಕಾರ್ಯಕರ್ತರು ಕೆ.ಆರ್. ಪುರದ ತಾಲ್ಲೂಕು ಕಚೇರಿ ಎದುರಿನ ಅಂಬೇಡ್ಕರ್ ಪುತ್ಥಳಿ ಎದುರು ಧರಣಿ ನಡೆಸಿದರು.   

ಕೆ.ಆರ್.ಪುರ: ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈ ಗಳಿಸಿರುವ ಅಕ್ರಮ ಸಂಪತ್ತನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ಕೆ.ಆರ್. ಪುರದ ತಾಲ್ಲೂಕು ಕಚೇರಿಯ ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ನಡೆಸಿದರು.

ಅಜಿತ್ ಕುಮಾರ್ ಮನೆ ಮೇಲೆ ಲೋಕಾಯುಕ್ತರು ನಡೆಸಿದ ದಾಳಿ ವೇಳೆ ನೂರಾರು ಕೋಟಿ ರೂಪಾಯಿ ಬೆಲೆಬಾಳುವ ಅಕ್ರಮ ಸಂಪತ್ತು ಪತ್ತೆಯಾಗಿದೆ. ಈ ಅಧಿಕಾರಿ ವಿರುದ್ಧ ಉನ್ನತಮಟ್ಟದ ತನಿಖೆ ಆಗಬೇಕು ಎಂದು ಸಮಿತಿಯ ಉಪ ಪ್ರಧಾನ ಸಂಚಾಲಕ ಮಣಿಪಾಲ್ ರಾಜಪ್ಪ ಆಗ್ರಹಿಸಿದರು.

ತಹಶೀಲ್ದಾರ್ ಲೋಪದಿಂದ ಮೇಡಿ ಆಗ್ರಹಾರ ಗ್ರಾಮದ ಸರ್ವೆ 24ರಲ್ಲಿ 9ಎಕರೆ 12 ಗುಂಟೆ ಜಾಗದಲ್ಲಿ ಕರ್ನಾಟಕ ದಲಿತ ಕ್ರಿಯಾ ಸಮಿತಿ ಸದಸ್ಯರಿಗೆ ನಿವೇಶನ ಹಕ್ಕು ಪತ್ರ ಹಂಚಿಕೆ ಮಾಡಿರುವುದನ್ನು ರದ್ದುಪಡಿಸಿ ಮರು ಹಂಚಿಕೆ ಮಾಡುತ್ತಿರುವ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮೇಡಿ ಆಗ್ರಹಾರ ಗ್ರಾಮದಲ್ಲಿ ಬಡಾವಣೆ ನಕ್ಷೆ ಪ್ರಕಾರ ಹಂಚಿಕೆ ಮಾಡಿರುವ 206 ನಿವೇಶನಗಳಿಗೆ ಸರ್ಕಾರ ನಿಗದಿಪಡಿಸಿರುವ ಒಂದು ನಿವೇಶನಕ್ಕೆ ₹ 12 ಸಾವಿರ ಹಣ ಪಾವತಿಸಿದೆ. ಬಡಾವಣೆಯಲ್ಲಿ ವಿದ್ಯುತ್, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲ ಸೌಲಭ್ಯ ಒದಗಿಸಿಲ್ಲ ಈ ಕಾರಣಕ್ಕಾಗಿ ಮನೆ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಈಗ ನಿವೇಶನಗಳನ್ನು ಮರು ಹಂಚಿಕೆಗೆ ಜಿಲ್ಲಾಧಿಕಾರಿ ಅನುಮೋದನೆ ನೀಡಿರುವುದು ಸರಿಯಲ್ಲ ಎಂದು ನಗರ ಪ್ರಧಾನ ಸಂಚಾಲಕ ಮುನಿನಂಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಗೋವಿಂದ್ ಕುಮಾರ್, ನಾರಾಯಣಸ್ವಾಮಿ, ಭರತ್, ಕೈಕೊಂಡ್ರಹಳ್ಳಿ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.