ADVERTISEMENT

‘ಹೇಳಿಕೆ ತಿರುಚುವ ಪ್ರಯತ್ನ’: ಆರೋಪ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 18:25 IST
Last Updated 6 ಫೆಬ್ರುವರಿ 2024, 18:25 IST
<div class="paragraphs"><p>ಕಾಂಗ್ರೆಸ್‌ </p></div>

ಕಾಂಗ್ರೆಸ್‌

   

ಯಲಹಂಕ: 'ಕೇಂದ್ರ ಸರ್ಕಾರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿಸುತ್ತಿರುವ ರಾಜ್ಯಕ್ಕೆ ಆಗುತ್ತಿರುವ ಅನುದಾನದ ತಾರತಮ್ಯದ ಕುರಿತು ಸಂಸದ ಡಿ.ಕೆ.ಸುರೇಶ್‌ ಅವರು ಧ್ವನಿ ಎತ್ತಿದ್ದಾರೆಯೇ ಹೊರತು ಪ್ರತ್ಯೇಕ ರಾಷ್ಟ್ರಕ್ಕಾಗಿ ಅಲ್ಲ. ಅವರ ಹೇಳಿಕೆ ತಿರುಚುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ’ ಎಂದು ಎಐಸಿಸಿ ಎಸ್‌ಸಿ ಘಟಕದ ಸದಸ್ಯ ಎಸ್‌.ರಾಬರ್ಟ್‌ ಕ್ರಿಸ್ಟೋಫರ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರದಲ್ಲಿಯೇ ಅತಿಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರದಿಂದ ರಾಜ್ಯಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದು, ತೆರಿಗೆ ಪಾಲಿನಲ್ಲಿಯೂ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. ದಕ್ಷಿಣ ಭಾರತದ ರಾಜ್ಯಗಳಿಂದ ಸಂಗ್ರಹಿಸಿದ ಸಂಪನ್ಮೂಲಗಳನ್ನು ಉತ್ತರ ಭಾರತದ ಹಾಗೂ ಅವರಿಗೆ ಬೇಕಾದ ರಾಜ್ಯಗಳಿಗೆ ಹೆಚ್ಚಿನ ಹಣ ಹಂಚಿಕೆ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ಪಾವತಿಸುತ್ತಿರುವವರಿಗೆ ಭಾರಿ ನಷ್ಟವಾಗುತ್ತಿದೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ ರಾಜ್ಯದಿಂದ ಸಂಗ್ರಹಿಸಿರುವ ಸಂಪನ್ಮೂಲವನ್ನು ನ್ಯಾಯಯುತವಾಗಿ ಮರು ಹಂಚಿಕೆ ಮಾಡಬೇಕಾಗಿತ್ತು. ಅದರ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ದಕ್ಷಿಣ ರಾಜ್ಯಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಸುರೇಶ್‌ ಅವರು ಧ್ವನಿಯೆತ್ತುವ ಮೂಲಕ ತಮ್ಮ ಹಕ್ಕನ್ನು ಕೇಳಿದ್ದಾರೆ. ಬಿಜೆಪಿ ಸರ್ಕಾರದ ನಡೆಯನ್ನು ಗಟ್ಟಿಧ್ವನಿಯಲ್ಲಿ ಟೀಕಿಸುವವರಿಗೆ ದೇಶದ್ರೋಹದ ಪಟ್ಟಕಟ್ಟುವುದು ಹೊಸದೇನಲ್ಲ. ಬಿಜೆಪಿಯವರು ವಿವಾದ ಸೃಷ್ಟಿಸಲು ಹೇಳಿಕೆ ತಿರುಚುವ ಮೂಲಕ ದೇಶದ ಜನರ ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ದೂರಿದರು.

ಮುಖಂಡರಾದ ಜೆರಾಲ್ಡ್‌, ಪೂರ್ಣಚಂದ್ರ ರೆಡ್ಡಿ, ಜಾನ್‌ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.