ಬೆಂಗಳೂರು: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಗ್ಯಾರಂಟಿ ಗುಂಗಿನಲ್ಲಿ ತೇಲುತ್ತಿದ್ದು, ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಕೊಟ್ಟ ಮಾತನ್ನು ಈಡೇರಿಸದ ಈ ಸರ್ಕಾರಕ್ಕೆ ಕಣ್ಣು, ಕಿವಿ ಎರಡೂ ಇಲ್ಲ’ ಎಂದು ‘ಎದ್ದೇಳು ಕರ್ನಾಟಕ ಸಂಘಟನೆ’ ಆಕ್ರೋಶ ವ್ಯಕ್ತಪಡಿಸಿದೆ.
ಇಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಜೆ.ಎಂ.ವೀರಸಂಗಯ್ಯ, ‘ಕಾಂಗ್ರೆಸ್ ನಾಯಕರಿಗೆ ಜನಸಾಮಾನ್ಯರ ಕಷ್ಟ ಕಾಣಿಸದಾಗಿದೆ. ಅಧಿಕಾರವನ್ನು ಜನವಿರೋಧಿಯಾಗಿ ಚಲಾಯಿಸದೆ, ನೀಡಿದ ಭರವಸೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಈಡೇರಿಸುವತ್ತ ಗಮನ ಹರಿಸಬೇಕು. ಇಲ್ಲವಾದಲ್ಲಿ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ಅನೇಕ ಜನ ವಿರೋಧಿ ಹಾಗೂ ಜೀವ ವಿರೋಧಿ ನೀತಿಗಳನ್ನು ರದ್ದು ಮಾಡದೆ ಮುಂದುವರಿಸಲಾಗುತ್ತಿದೆ. ಅದರ ಜತೆಗೆ, ಈ ಸರ್ಕಾರವು ಜನವಿರೋಧಿ ನೀತಿಗಳನ್ನೇ ಜಾರಿ ಮಾಡುತ್ತಿದೆ. ಇನ್ನಾದರೂ ಸರ್ಕಾರ ಜನ ಚಳವಳಿಗೆ ಕಿವಿಯಾಗಬೇಕು’ ಎಂದು ಹೇಳಿದರು.
ಸಂಘಟನೆಯ ಕೆ.ಎಲ್. ಅಶೋಕ್, ‘ಎರಡು ವರ್ಷಗಳ ಸಾಧನಾ ಸಮಾವೇಶ ನಡೆಸಿದ ಕಾಂಗ್ರೆಸ್ ಸರ್ಕಾರ, ಆತ್ಮಾವಲೋಕನಕ್ಕಾಗಿ ಸಮಾವೇಶ ನಡೆಸಬೇಕಿದೆ. ಸಚಿವರು, ಶಾಸಕರು ಹೋದಲ್ಲಿ ಬಂದಲ್ಲಿ ‘ಗ್ಯಾರಂಟಿ’ಗಳನ್ನು ವೈಭವೀಕರಿಸುತ್ತಿದ್ದಾರೆ. ಬಿಜೆಪಿ ದುರಾಡಳಿತದಿಂದ ಬೇಸತ್ತ ರಾಜ್ಯದ ಜನರು, ದೊಡ್ಡ ನಿರೀಕ್ಷೆಯೊಂದಿಗೆ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತ ನೀಡಿದ್ದರು. ಆದರೆ, ಈಗ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೋಮುವಾದ ಹಾಗೂ ಭ್ರಷ್ಟಾಚಾರ ಹೆಚ್ಚಾಗಿದೆ’ ಎಂದು ಆರೋಪಿಸಿದರು.
ಲೇಖಕಿ ಬಿ.ಟಿ. ಲಲಿತಾ ನಾಯಕ್, ‘ರೈತರು, ಕಾರ್ಮಿಕರು, ಮಹಿಳೆಯರು ಸೇರಿ ವಿವಿಧ ವರ್ಗದವರು ಈ ಸರ್ಕಾರದ ಆಡಳಿತದಲ್ಲಿ ನೋವನ್ನು ಉಣ್ಣುತ್ತಿದ್ದಾರೆ. ಶಾಲಾ ಶುಲ್ಕಗಳಿಗೆ ಕಡಿವಾಣ ಇಲ್ಲವಾಗಿದೆ. ಬಡವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟರೂ ನೀರು ಸೇರಿ ವಿವಿಧ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಮಳೆ ಅವಾಂತರ, ರಸ್ತೆ ಗುಂಡಿಗಳಿಂದ ಬೆಂಗಳೂರು ನಲುಗಿ ಹೋಗಿದೆ. ಸಚಿವರಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲವಾಗಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.